ಬೆಳಗಾವಿ: ಸೋಮವಾರ (ಫೆ.27) ಬೆಳಗಾವಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಲು, ವಿವಿಧ ಕ್ಷೇತ್ರಗಳ ಆರು ಕಾರ್ಮಿಕರನ್ನು ಸಿದ್ಧಗೊಳಿಸಲಾಗಿದೆ.
ಪೌರಕಾರ್ಮಿಕ ಮಹಿಳೆ ಮೀನಾಕ್ಷಿ ಕೃಷ್ಣ ತಳವಾರ, ಕೃಷಿ ಕಾರ್ಮಿಕ ಮಹಿಳೆ ಶೀಲಾ ಖನ್ನೂಕರ, ನೇಕಾರ ಕಲ್ಲಪ್ಪ ತಂಬಗಿ, ಆಟೊ ಚಾಲಕ ಮಯೂರ ಯಶವಂತ ಚವ್ಹಾಣ, ಹೋಟೆಲ್ ಮಾಣಿ ಚಂದ್ರಕಾಂತ ಮಹಾದೇವ ಹೋನಕರ, ಕಟ್ಟಡ ಕಾರ್ಮಿಕ ಮಂಗೇಶ ಬಸ್ತವಾಡಕರ ಅವರಿಗೆ ಶಿಷ್ಟಾಚಾರದ ತರಬೇತಿ ನೀಡಲಾಗಿದೆ.
ಸೋಮವಾರ ಮಧ್ಯಾಹ್ನ 2ಕ್ಕೆ ನಗರಕ್ಕೆ ಬರುವ ಪ್ರಧಾನಿ, ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ರೋಡ್ ಶೋ ನಡೆಸಲಿದ್ದಾರೆ. 10.5 ಕಿ.ಮೀ ಉದ್ದದ ರೋಡ್ ಶೋನಲ್ಲಿ ಎಂಟು ಕಡೆ ವೀಕ್ಷಣಾ ಸ್ಥಳ ಮಾಡಲಾಗಿದೆ.
ರೋಡ್ ಶೋ ಮಾರ್ಗದಲ್ಲಿ 90 ಕಡೆ ವಿಶಿಷ್ಟ ವೇದಿಕೆಗಳನ್ನು ಸಿದ್ಧಗೊಳಿಸಲಾಗಿದೆ. ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಂಸ್ಕೃತಿ, ಪರಂಪರೆ ಸಾರುವ ಪ್ರದರ್ಶನ ಈ ವೇದಿಕೆಗಳಲ್ಲಿ ನಡೆಯಲಿದೆ. ಅಲ್ಲದೇ, ಆಯಾ ರಾಜ್ಯಗಳಿಗೆ ಪ್ರಧಾನಿ ನೀಡಿದ ಕೊಡುಗೆಗಳ ಪ್ರದರ್ಶನ ಇರಲಿದೆ. ‘ಕಾಂಗ್ರೆಸ್ ಯುಗ- ಮೋದಿ ಯುಗ’ ಎಂಬ ಬೃಹತ್ ಫ್ಲೆಕ್ಸ್‌ಗಳನ್ನು ಮಾಡಿದ್ದು ಯಾರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಗಿವೆ ಎಂಬ ಎಲ್‌ಇಡಿ ವಿಡಿಯೊ ಪ್ರದರ್ಶನ, ಭಿತ್ತಿಚಿತ್ರಗಳನ್ನೂ ಪ್ರದರ್ಶಿಸಲಾಗುತ್ತಿದೆ.
ಪ್ರಧಾನಿ ಬೆಳಗಾವಿ ದಕ್ಷಿಣ ಕ್ಷೇತ್ರ ಪ್ರವೇಶಿಸುವ ಸ್ಥಳದಲ್ಲಿ 10 ಸಾವಿರ ಮಹಿಳೆಯರು ಒಂದೇ ಬಣ್ಣದ ಸೀರೆಯುಟ್ಟು ಕೇಸರಿ ಪೇಟಾ ಧರಿಸಿ, ಪೂರ್ಣಕುಂಭ ಹೊತ್ತು ಪ್ರಧಾನಿಗೆ ಸ್ವಾಗತ ಕೋರಲಿದ್ದಾರೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಮಧ್ಯಾಹ್ನ 12.45ಕ್ಕೆ ಮಾಲಿನಿ ಸಿಟಿಯ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಒಂದು ಲಕ್ಷ ಕುರ್ಚಿಗಳನ್ನು ಹಾಕಲಾಗಿದೆ. ಲಕ್ಷ ಜನರಿಗೆ ಊಟ, ನೀರಿನ ವ್ಯವಸ್ಥೆ ಇರಲಿದೆ ಎಂದು ಮೂಲಗಳು ತಿಳಿಸಿವೆ.