ಬೆಳಗಾವಿ: ‘ಸರ್ಕಾರಿ ಯೋಜನೆಗಳ ಮೇಲೆಯೇ ಪ್ರತಿಯೊಬ್ಬರು ಅವಲಂಬಿತರಾದರೆ ದೇಶ ಪ್ರಗತಿ ಹೊಂದುವುದು ಕಷ್ಟ. ಹಾಗಾಗಿ ದೇಶ ಮತ್ತು ತನಗೆ ಏನು ನೀಡುತ್ತಿದೆ ಎಂಬ ಸ್ವಾರ್ಥ ಚಿಂತನೆಯನ್ನು ತೊರೆಯುವುದು ಮುಖ್ಯ. ದೇಶ ಮತ್ತು ಸಮಾಜದ ಪ್ರಗತಿಗೆ ಶ್ರಮಿಸುವ ಅವಶ್ಯಕತೆ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ.ತಳವಾರ ಸಾಬಣ್ಣ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನೇತೃತ್ವದಲ್ಲಿ ಶನಿವಾರ ಜರುಗಿದ ಪಂಡಿತ ದೀನದಯಾಳ ಉಪಾಧ್ಯಾಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲ ಹೊಂದಿದವರು, ದುರ್ಬಲ ಜನಾಂಗದ ಉನ್ನತಿಗೆ ತ್ಯಾಗ ಮಾಡುವ ಅವಶ್ಯಕತೆಯಿದೆ. ಮೇಲ್ವರ್ಗ- ಕೆಳವರ್ಗ ಎಂಬ ದೊಡ್ಡ ಕಂದಕ ಸಮಾಜದಲ್ಲಿ ಉಂಟಾಗಿದೆ. ಈ ಕಂದಕ ತೊಡೆದು ಹಾಕಲು ಪರಸ್ಪರ ಹೊಂದಾಣಿಕೆ ಅಗತ್ಯ. ಒಬ್ಬರಿಗೊಬ್ಬರು ಶ್ರಮಿಸುವುದು ಅಗತ್ಯ. ಪಂಡಿತ ದೀನದಯಾಳ ಅಶಯದಂತೆ ಸಮಾಜದ ಕೊನೆಯ ವ್ಯಕ್ತಿಗೂ ಸರ್ಕಾರದ ಎಲ್ಲ ಯೋಜನೆಗಳು ಲಭಿಸುವಂತಾಗಬೇಕು’ ಎಂದರು.