ಬೆಂಗಳೂರು: ”ನೆಲ, ಜಲ, ನುಡಿಯ ಬಗ್ಗೆ ಕನ್ನಡ ಮತ್ತು ಕರ್ನಾಟಕದ ಮೇಲೆ ಸದಾ ಪ್ರಹಾರ ನಡೆಸುತ್ತಿರುವ ಬಿಜೆಪಿ ಕನ್ನಡಿಗರ ವಿರುದ್ಧ ತನ್ನ ರಕ್ಕಸ ನೀತಿಗಳನ್ನು ಮುಂದುವರಿಸಿದೆ. ಈಗ ಕರ್ನಾಟಕದ ಹಾಲಿನಲ್ಲೂ ಗುಜರಾತಿನ ಹುಳಿ ಹಿಂಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಟಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಗಳ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
”ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕವನ್ನು ಉತ್ತರ ಭಾರತದ ಬ್ಯಾಂಕ್ ಗಳಿಗೆ ಅಡಿಯಾಳನ್ನಾಗಿಸಿ, ಹಿಂದಿ ಭಾಷಿಗರ ಉದ್ಧಾರಕ್ಕಾಗಿ ಕನ್ನಡಿಗರ ಅನ್ನ ಕಸಿದುಕೊಂಡ ಬಿಜೆಪಿ ಈಗ, ನಂದಿನಿಯನ್ನು ಹೊಡೆದುಕೊಂಡು ಹೋಗಲು ಹಿಡನ್ ಅಜೆಂಡಾ ರೂಪಿಸಿದಂತಿದೆ. ಕರ್ನಾಟಕ ಎಂದಿಗೂ ಗುಜರಾತಿನ ವಸಾಹತು ಆಗುವುದಿಲ್ಲ” ಎಂದು ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಅಮುಲ್ ಜತೆ ನಂದಿನಿ ವಿಲೀನ ಸಾಧ್ಯವಿಲ್ಲ. ನಮ್ಮ ರೈತರ ಅನ್ನ ಕಸಿಯುವ ಕೆಲಸವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೆಎಂಎಫ್ ಕನ್ನಡಿಗರ ಜೀವನಾಡಿ ಮಾತ್ರವಲ್ಲ, ಸಮಸ್ತ ಕನ್ನಡಿಗರ ಆಸ್ತಿ ಮತ್ತು ಅಸ್ಮಿತೆ. ಅಮಿತ್ ಶಾ ಅವರು ಇದೆಲ್ಲವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಟ್ವೀಟ್ ಮಾಡಿದ್ದಾರೆ.