Breaking News

ರೈತರ ಪ್ರೋತ್ಸಾಹಧನ 10 ರೂ. ಗೆ ಏರಿಸಲು ಮನವಿ: ಬಾಲಚಂದ್ರ ಜಾರಕಿಹೊಳಿ

Spread the love

ಬೆಂಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ರೈತರು ಅಪಾರ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್‌ನಲ್ಲಿ ಈಗ ಸರಕಾರ ರೈತರಿಗೆ ನೀಡುವ ಪ್ರೋತ್ಸಾಹ ಮೊತ್ತವನ್ನು 5ರಿಂದ 10 ರೂ.ಗೆ ಏರಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

 

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ಶನಿವಾರ ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಸರಕಾರ ನೀಡುವ ಪ್ರೋತ್ಸಾಹಧನ ಬಿಟ್ಟರೆ ಬೇರೆ ಲಾಭಾಂಶವಿಲ್ಲ. ಆ ಹಿನ್ನೆಲೆಯಲ್ಲಿ ಪ್ರೋತ್ಸಾಹಧನ ಏರಿಕೆ ಸಂಬಂಧ ಜನವರಿಯಲ್ಲಿ ಬೃಹತ್‌ ರೈತರ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಪ್ರತಿ ರೈತರ ಮನೆಯಿಂದ ಒಬ್ಬರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಸರಕಾರ 1,200 ಕೋಟಿ ರೂ. ಬಜೆಟ್‌ ಮಂಡನೆ ಮಾಡಲಿದೆ. ಪ್ರೋತ್ಸಾಹಧನ ಹೆಚ್ಚಳಕ್ಕಾಗಿ ಇನ್ನೂ 800 ಕೋಟಿ ರೂ. ಸರಕಾರ ಬಜೆಟ್‌ನಲ್ಲಿ ನೀಡಲಿ, ಇದರಿಂದಾಗಿ ರಾಜ್ಯದ ರೈತರು ಬದುಕುತ್ತಾರೆ. ಯಾವತ್ತೂ ಕೆಎಂಎಫ್ ಸೇರಿ ರಾಜ್ಯದ 14 ಹಾಲು ಒಕ್ಕೂಟಗಳು ರೈತರ ಪರವಾಗಿ ಇರಲಿವೆ ಎಂದರು.

ಸರಕಾರ ಪ್ರತಿ ಲೀಟರ್‌ಗೆ 2 ರೂ. ಏರಿಕೆ ಮಾಡಿ ರೈತರ ನೆರವಿಗೆ ಧಾವಿಸಿದೆ. ಹೆಚ್ಚಿಸಿರುವ ಹಣವನ್ನು ರೈತರಿಗೆ ತಲುಪಿಸುವ ಕೆಲಸವನ್ನು ಆಯಾ ಹಾಲು ಒಕ್ಕೂಟದ ನಿರ್ದೇಶಕರು ಮಾಡಬೇಕು. ಈಗಾಗಲೇ ಕೆಲವು ಹಾಲು ಒಕ್ಕೂಟಗಳು 2 ರೂ. ಅನ್ನು ರೈತರಿಗೆ ನೀಡುತ್ತಿವೆ. ಇನ್ನೂ ಕೆಲವು ಯೂನಿಯನ್‌ಗಳು ಹಂಚಿಕೆ ಮಾಡುವ ಹಂತದಲ್ಲಿವೆ. ಹಾಲಿನ ದರ ಏರಿಕೆ ಹಣವನ್ನು ಶೀಘ್ರದಲ್ಲೆ ರೈತರಿಗೆ ವಿತರಿಸುವಂತೆ ಮನವಿ ಮಾಡಿದರು.

ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌
ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ರಾಜ್ಯದ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಬಂಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದಾರೆಂದು ಹೇಳಿದರು.

ರಾಜ್ಯದಲ್ಲಿ 15 (ಹೊಸದಾಗಿ ಸೇರಿರುವುದು ಸೇರಿ)ಒಕ್ಕೂಟಗಳಿದ್ದು 26 ಲಕ್ಷ ರೈತರು ಈ ಒಕ್ಕೂಟದಲ್ಲಿದ್ದಾರೆ. ಇದರಲ್ಲಿ ಸುಮಾರು 9 ಲಕ್ಷ ಮಹಿಳೆಯರು ಕೂಡ ಹಾಲು ಒಕ್ಕೂಟದ ಸದಸ್ಯರಾಗಿದ್ದಾರೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರಕಾರ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದು ಇದರ ಅನುಕೂಲ ಪಡೆಯುವಂತೆ ಮನವಿ ಮಾಡಿದರು.

ಕೇಂದ್ರ ಪಶುಸಂಗೋಪನ ಮತ್ತು ಹೈನುಗಾರಿಕೆ ಇಲಾಖೆ ರಾಜ್ಯ ಸಚಿವ ಸಂಜೀವ್‌ ಕುಮಾರ್‌ ಬಲ್ಯಾನ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಹೈನುಗಾರಿಕೆ ಮತ್ತು ಪಶುಸಂಗೋಪನ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ಈಗಾಗಲೇ ಕೆಎಂಫ್ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. ಕೆಎಂಎಫ್ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಕೆಎಂಎಫ್ ಕೇಂದ್ರ ತೆರೆದರೆ ಎಲ್ಲ ರೀತಿಯ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ