ಬೆಂಗಳೂರು: ಬಹುತೇಕ ನಟ, ನಟಿಯರಿಗೆ ಒಂದು ಸಿನಿಮಾದಿಂದ ಟರ್ನಿಂಗ್ ಪಾಯಿಂಟ್ ಸಿಗುತ್ತದೆ. ಅಂತಹ ಸಿನಿಮಾಗಳು ಅವರ ಜೀವನದಲ್ಲಿ ಬೇಗ ಬರುಬಹುದು ಅಥವಾ ತಡವಾಗಿ ಬರಬಹುದು. ಅಂತಹ ಟರ್ನಿಂಗ್ ಪಾಯಿಂಟ್ ಸಿನಿಮಾಗಳಿಂದ ಅವರ ಸಂಪೂರ್ಣ ಕರೀಯರ್ ಬದಲಾಗುತ್ತದೆ. ಅಂತಹದ್ದೇ ಬದಲಾವಣೆ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಆಗಿದ್ದು, ಈ ಸಿನಿಮಾದಿಂದಾಗಿ.
ದರ್ಶನ್ ಡಿ ಬಾಸ್ ಆಗಿ ಬೆಳೆದ ಬಗೆ ನಿಮಗೆ ತಿಳಿದೇ ಇದೆ. ದರ್ಶನ್ ಸಿನಿಮಾ ಕರೀಯರ್‍ನಲ್ಲಿ ಸಹ ಸಾಕಷ್ಟು ಏಳು, ಬೀಳುಗಳನ್ನು ಅನುಭವಿಸಿದ್ದಾರೆ. ಅದೇ ರೀತಿ ಸಕ್ಸಸ್ ಸಹ ಕಂಡಿದ್ದಾರೆ. ಇದೀಗ ರಾಬರ್ಟ್ ಸಿನಿಮಾ ಮೂಲಕ ರಂಜಿಸಲು ಸಹ ಸಿದ್ಧತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೊಂದು ಖುಷಿ ವಿಚಾರವೆಂಬಂತೆ ಸಾರಥಿ ಸಿನಿಮಾ ಬಿಡುಗಡೆಯಾಗಿ 9 ವರ್ಷ ಪೂರೈಸಿದೆ. ಹೀಗಾಗಿ ಸೆಪ್ಟೆಂಬರ್ 30 ಡಿ ಬಾಸ್ ಸಿನಿಮಾ ಕರೀಯರ್‍ನ ವಿಶೇಷ ದಿನ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಸಿನಿಮಾದಿಂದಾಗಿಯೇ ಡಿ ಬಾಸ್ ಮತ್ತೆ ಪುಟಿದೇಳುವಂತಾಯಿತು ಎಂಬುದು ಸಿನಿ ರಸಿಕರ ಮಾತು.
ನವಗ್ರಹ ಸಿನಿಮಾ ಬಳಿಕ ಡಿ ಬಾಸ್‍ಗೆ ತಮ್ಮ ಸಿನಿಮಾ ಕರೀಯರ್‍ನಲ್ಲಿ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ‘ಸಾರಥಿ’. ಈ ಮೂಲಕ ಯಜಮಾನ ಅತಿ ದೊಡ್ಡ ಯಶಸ್ಸು ಕಂಡಿದ್ದರು. ಹೀಗಾಗಿ ಸಾರಥಿ ಸಿನಿಮಾ ಬಿಡುಗಡೆಯಾದ ಸೆಪ್ಟೆಂಬರ್ 30ರ ದಿನವನ್ನು ಸಂಭ್ರದಿಂದ ಆಚರಿಸುತ್ತಾರೆ. ಡಿ ಬಾಸ್ ಸಹ ಈ ದಿನವನ್ನು ಅಷ್ಟೇ ವಿಶೇಷವಾಗಿ ನೋಡುತ್ತಾರೆ.
ದರ್ಶನ್‍ಗಾಗಿ ನಿರ್ದೇಶಕ ದಿನಕರ್ ತೂಗುದೀಪ್ ಮಾಡಿದ ಪಕ್ಕಾ ಮಾಸ್ ಕಮರ್ಷಿಯಲ್ ಸಿನಿಮಾ ಸಾರಥಿ. ಈ ಸಿನಿಮಾದಲ್ಲಿ ಡಿ ಬಾಸ್ ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಒಂದಡೆಯಾದರೆ, ಫ್ಲ್ಯಾಶ್‍ಬ್ಯಾಕ್ ಕಥೆಗೆ ಸಹ ಪ್ರೇಕ್ಷಕರು ಅಷ್ಟೇ ಮಾರು ಹೋಗಿದ್ದರು. ಹೀಗಾಗಿ ಕುಟುಂಬ ಸಮೇತರಾಗಿ ಸಿನಿಮಾ ನೋಡಿದ್ದರು. ಆರಂಭದಲ್ಲಿ ‘ಸಾರಥಿ’ ರಾಜ್ಯಾದ್ಯಂತ 147 ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಜನಪ್ರಿಯವಾದಂತೆಲ್ಲ ಚಿತ್ರಮಂದಿರಗಳ ಸಂಖ್ಯೆ ಬೆಳೆಯುತ್ತ ಹೋಗಿತ್ತು. ಹೀಗಾಗಿ ಈ ಸಿನಿಮಾ ಗಲ್ಲಾಪೆಟ್ಟಿಗೆಯ ವಿಷಯದಲ್ಲಿ ಭಾರೀ ಸದ್ದು ಮಾಡಿತ್ತು.
ಸದ್ಯ ‘ಸಾರಥಿ’ಗೆ 9 ವರ್ಷ ತುಂಬಿರುವುದರಿಂದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಸಾರಥಿ’ ಸಿನಿಮಾ ಕುರಿತು ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಯಂಚಿಕೊಳ್ಳುವ ಮೂಲಕ ಆ ದಿನಗಳನ್ನು ನೆನೆಯುತ್ತಿದ್ದಾರೆ. ಟ್ವಿಟ್ಟರಿನಲ್ಲಿ ಸಹ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಡಿಬಾಸ್ ಹ್ಯಾಷ್ ಟ್ಯಾಗ್ ಬಳಸಿ ಪೋಸ್ಟ್ ಮಾಡಲಾಗುತ್ತಿದೆ.