ನವದೆಹಲಿ: ಚುನಾವಣಾ ಬಾಂಡ್‌ಗಳು ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹಕ್ಕೆ ಪಾರದರ್ಶಕ ವಿಧಾನವಾಗಿದೆ. ಇದರ ಮೂಲಕ ಕಪ್ಪು ಹಣ ಅಥವಾ ಲೆಕ್ಕವಿಲ್ಲದ ಹಣ ಪಡೆಯುವುದು ಅಸಾಧ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಕೇಂದ್ರ ಸರ್ಕಾರ ಹೇಳಿದೆ.
ನಿಧಿ ಸಂಗ್ರಹದಲ್ಲಿ ಪಾರದರ್ಶಕತೆ ತರಲು ರಾಜಕೀಯ ಪಕ್ಷಗಳು ದೇಣಿಗೆ ರೂಪದಲ್ಲಿ ನಗದು ಸ್ವೀಕರಿಸುವ ಬದಲಾಗಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆರೋಪಿಸುವ ವಾದದಲ್ಲಿ ಅರ್ಥವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪ್ರಶ್ನಿಸಿ ಎನ್‌ಜಿಒ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ಸ್, ಸಿಪಿಎಂ ಪಕ್ಷ ಮತ್ತು ಇತರರು ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಿದ ನ್ಯಾ. ಬಿ.ಆರ್.ಗವಾಯಿ ಮತ್ತು ನ್ಯಾ. ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ನ್ಯಾಯಪೀಠದ ಎದುರು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
ಅರ್ಜಿದಾರರ ಪರವಾಗಿ ನ್ಯಾಯವಾದಿಗಳಾದ ಪ್ರಶಾಂತ್ ಭೂಷಣ್, ಕಪಿಲ್ ಸಿಬಲ್, “ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಪ್ರತಿ ವಿಧಾನಸಭೆ ಚುನಾವಣೆಗೂ ಮೊದಲು ಇದನ್ನು ವಿತರಿಸಲಾಗುತ್ತಿದೆ. ವಿಸ್ತೃತ ಪೀಠದಿಂದ ಶೀಘ್ರ ಈ ಪ್ರಕರಣದ ವಿಚಾರಣೆ ನಡೆಸಬೇಕು,’ ಎಂದು ವಾದಿಸಿದರು.