ಚಿತ್ರದುರ್ಗ: ಷರತ್ತುಗಳನ್ನು ಉಲ್ಲಂಘಿಸಿ ಮಠ ಹಾಗೂ ಪೀಠಾಧಿಪತಿ ಘನತೆ, ಗೌರವಕ್ಕೆ ಧಕ್ಕೆ ತರಲು ಒಳಸಂಚು ರೂಪಿಸಿದ ಆರೋಪದ ಮೇರೆಗೆ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರನ್ನು ಮುರುಘಾ ಮಠದ ಆಡಳಿತಾಧಿಕಾರಿ ಮತ್ತು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ.
ಮಾರ್ಚ್ 7ರಂದು ಅವರು ಈ ಹುದ್ದೆಗೆ ನೇಮಕಗೊಂಡಿದ್ದರು. ಈ ವೇಳೆ ಬಸವರಾಜನ್ ಅವರಿಗೆ 8ಕ್ಕೂ ಹೆಚ್ಚು ಷರತ್ತುಗಳನ್ನು ವಿಧಿಸಲಾಗಿತ್ತು. 2007ರಲ್ಲಿಯೂ ಇವರನ್ನು ಇದೇ ಹುದ್ದೆಯಿಂದ ಕಿತ್ತುಹಾಕಲಾಗಿತ್ತು.
‘ಲಿಂಗಾಯತ-ವೀರಶೈವ ಮತ್ತು ವಿವಿಧ ಸಮಾಜಗಳ ಮುಖಂಡರ ಒತ್ತಾಸೆಯಂತೆ ಬಸವರಾಜನ್ ಅವರನ್ನು ಮಾರ್ಚ್ 7ರಂದು ಪುನರ್ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಮಠ ಮತ್ತು ಬಸವರಾಜನ್ ಅವರ ನಡುವಿನ ವ್ಯಾಜ್ಯಗಳನ್ನು ಮುಕ್ತಾಯಗೊಳಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಮೊದಲ ಹೆಜ್ಜೆಯಾಗಿ ನಗರದ ಕಾವೇರಿ ಸ್ಟೋರ‍್ಸ್‌ಗೆ ಸಂಬಂಧಿಸಿದ ವ್ಯಾಜ್ಯವನ್ನು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ರಾಜಿಯೊಂದಿಗೆ ಇತ್ಯರ್ಥಗೊಳಿಸಿಕೊಳ್ಳಲಾಗಿತ್ತು. ಆದರೆ, ಆನಂತದ ಅವರ ನಡೆಗಳು ಅನುಮಾಸ್ಪದವಾಗಿದ್ದವು’ ಎಂದು ಮಠ ಆರೋಪಿಸಿದೆ.
‘ಬಸವರಾಜನ್ ಅವರು ಆಡಳಿತಾತ್ಮಕವಾಗಿ ಯಾವುದೇ ರೀತಿಯ ಸಹಕಾರ ನೀಡುತ್ತಿರಲಿಲ್ಲ. ಮಠದ ಪರವಾಗಿ ಬಸವರಾಜನ್ ಅವರ ಹೆಸರಿನಲ್ಲಿ ಖರೀದಿಸಿದ ಆಸ್ತಿಗಳನ್ನು ಹಿಂದಿರುಗಿಸದೇ ಸಮಸ್ಯೆ ಸೃಷ್ಟಿಸಿದರು. ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಅಮೆರಿಕ ಮತ್ತು ಮಾರಿಷಸ್ ಪ್ರವಾಸಗಳಲ್ಲಿರುವಾಗ ಮಠದ ವಿರೋಧಿ ಕೃತ್ಯದಲ್ಲಿ ತೊಡಗಿದರು. ಪೀಠಾಧ್ಯಕ್ಷರು ಹಲವು ಬಾರಿ ಸೂಚನೆ ನೀಡಿದರೂ ತಪ್ಪು ತಿದ್ದಿಕೊಳ್ಳಲಿಲ್ಲ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.