ಆದ್ರೆ ಈಗ ಶಿಕ್ಷಣಕ್ಕೆ ಹೆಸರುವಾಸಿಯಾಗಿರೋ ಈ ವಿದ್ಯಾನಗರಿಯ ಕಾಲೇಜೊಂದರಲ್ಲಿ ಹೇಯ ಕೃತ್ಯವೊಂದು ನಡೆದಿದೆ. ಧಾರವಾಡ ಶಿಕ್ಷಣ ಕಾಶಿ ಖ್ಯಾತಿಗೆ ಮಸಿ ಬಳಿಯೋವಂತಹ ಘಟನೆ ನಡೆದಿದೆ. ವಿದ್ಯಾರ್ಥಿನಿಗೆ ಜ್ಯೂಸ್ ಎಂದು ಬಿಯರ್ ಕುಡಿಸಿ ಲೈಂಗಿಕ ಶೋಷಣೆ ಎಸಗಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲೇ ಕೃತ್ಯಕ್ಕೆ ಸಾಥ್ ಕೊಟ್ಟಿದ್ದಾನೆ.
ಶಾಲೆ-ಕಾಲೇಜು ಅಥವಾ ವಿದ್ಯಾದೇಗುಲ ಅಂದಾಕ್ಷಣ ಎಲ್ಲರಿಗೂ ಭಕ್ತಿಭಾವ ಮೂಡುತ್ತೆ. ಬದುಕೋಕೆ ಶಿಕ್ಷಣ ಮುಖ್ಯ ಅಂತಾ ಹೇಳ್ತೇವೆ. ಶಿಕ್ಷಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸಿ ಗೌರವಿಸ್ತೇವೆ. ಆದರೆ ಧಾರವಾಡದಲ್ಲಿ ಶಿಕ್ಷಕ ವೃತ್ತಿಗೆ ಕಪ್ಪುಚುಕ್ಕೆಯಂತಹ ಘಟನೆ ನಡೆದಿದೆ.
ಕಾಲೇಜಿನಲ್ಲಿ ಲೈಂಗಿಕ ಶೋಷಣೆ!
ಧಾರವಾಡದ ಜಯನಗರದಲ್ಲಿನ ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ನಡೆಯಬಾರದ ಘಟನೆ ನಡೆದುಹೋಗಿದೆ. ವಿದ್ಯಾರ್ಜನೆ ಮಾಡೋ ಜಾಗದಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿರೋ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕಾಲೇಜು ಪ್ರಾಂಶುಪಾಲ ಮಹದೇವ ಕುರವತ್ತಿಗೌಡರ
ಕಾಲೇಜು ಅಧ್ಯಕ್ಷನಿಂದ ಕೃತ್ಯ!
ಖುದ್ದು ಈ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷನ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ರೆ, ಅದಕ್ಕೆ ಪ್ರಿನ್ಸಿಪಾಲ್ ಸಾಥ್ ನೀಡುತ್ತಾರೆ ಅನ್ನೋ ಆರೋಪವೂ ಜೋರಾಗಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹದೇವ ಕುರವತ್ತಿಗೌಡರ ವಿರುದ್ಧ ದೂರು ದಾಖಲಾಗಿದೆ.
ಕಾಲೇಜು ಅಧ್ಯಕ್ಷ ಬಸವರಾಜ ಯಡವಣ್ಣವರ
ಬಿಯರ್ ಕುಡಿಸಿ ವಿದ್ಯಾರ್ಥಿನಿಗೆ ಶೋಷಣೆ!
ವಿದ್ಯಾರ್ಥಿನಿಯನ್ನು ಕಾಲೇಜಿನ ಅಧ್ಯಕ್ಷ ಪುಸಲಾಯಿಸಿ ದಾಂಡೇಲಿಗೆ ಕರೆದುಕೊಂಡು ಹೋಗಿದ್ದನಂತೆ. ನಂತರ ಅಲ್ಲಿ ಜ್ಯೂಸ್ ಅಂತಾ ಹೇಳಿ ಬಿಯರ್ ಕುಡಿಸಿ ಆಕೆ ನಿದ್ದೆಗೆ ಜಾರಿದಾಗ ಶೋಷಣೆ ಮಾಡಿದ್ದಾನಂತೆ. ವಿದ್ಯಾರ್ಥಿನಿಯ ನೋವು ಕೇಳಬೇಕಾದ ಪ್ರಾಚಾರ್ಯನೇ ಅಧ್ಯಕ್ಷನಿಗೆ ಸಾಥ್ ಕೊಟ್ಟಿದ್ದಾನೆ. ಈತನೇ ಅಧ್ಯಕ್ಷರ ಜೊತೆ ವಿದ್ಯಾರ್ಥಿನಿಯರನ್ನು ಕಳುಹಿಸಿ ಕೊಡುತ್ತಿದ್ದ ಅನ್ನೋ ಆರೋಪವೂ ಕೇಳಿ ಬಂದಿದೆ.