ಸಾಗರ: ಒಂದೆಡೆ ಜೋಗದ ಮೈಸೂರು ಬಂಗ್ಲೋ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಪ್ರವಾಸಿಗರ ಕಾರಣ ತಾಲೂಕಿನ ಜಗತ್ಪ್ರಸಿದ್ಧ ಜೋಗದಲ್ಲಿ ನಿಯಂತ್ರಣ ವ್ಯವಸ್ಥೆ ಸಂಪೂರ್ಣವಾಗಿ ಪೊಲೀಸರ ಕೈಯಿಂದ ಜಾರಿದ ಘಟನೆಗೆ ಭಾನುವಾರ ಸಾಕ್ಷಿಯಾಯಿತು.
10 ಸಾವಿರಕ್ಕೂ ಹೆಚ್ಚು ಜನ ಭೇಟಿ ಇತ್ತ ಹಿನ್ನೆಲೆಯಲ್ಲಿ ಕಾಮಗಾರಿ ನಡೆದಿರುವ ಗೇಟ್ ಒಳಗಿನ ಪ್ರದೇಶದಲ್ಲಿ ಪಾರ್ಕಿಂಗ್ ರದ್ದುಗೊಳಿಸಲಾಗಿತ್ತು. ಹಾಗಾಗಿ ಜನ ರಸ್ತೆಯ ಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸಿದ್ದರಿಂದ ಟ್ರಾಫಿಕ್ ಜ್ಯಾಮ್ ಸಾಮಾನ್ಯವಾಗಿತ್ತು. ವಾಹನಗಳನ್ನು ತೆಗೆಯುವಾಗ ವಾಹನಗಳ ನಡುವೆ ಸಣ್ಣಪುಟ್ಟ ಢಿಕ್ಕಿಗಳಾಗಿ ಪ್ರವಾಸಿ ವಾಹನಗಳ ಚಾಲಕರು ಪರಸ್ಪರ ಮಾತಿನ ಚಕಮಕಿ ನಡೆಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
ಈ ನಡುವೆಯೂ ಜೋಗ ಅಭಿವೃದ್ಧಿ ಪ್ರಾಧಿಕಾರದವರು ಜನರಿಂದ ಪ್ರವೇಶ ಶುಲ್ಕ ಸಂಗ್ರಹಿಸುತ್ತಿದ್ದು, ಸಂಜೆ ನಾಲ್ಕರ ವೇಳೆಗೆ ಟೋಲ್ ಸಂಗ್ರಹ ಎರಡು ಲಕ್ಷ ರೂ. ದಾಟಿತ್ತು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಜೋಗದಲ್ಲಿನ ಪ್ರವಾಸಿಗರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಾಲ್ಕೆಂಟು ಜನ ಮಂಗಳಮುಖಿಯರು ಸ್ಥಳಕ್ಕೆ ಆಗಮಿಸಿದ್ದು, ಪ್ರವೇಶ ಶುಲ್ಕ ಪಾವತಿಸಿದವರೂ ಇವರಿಗೆ ಕೇಳಿದಷ್ಟು ಹಣ ಕೊಟ್ಟು ಜೋಗದ ವ್ಯೂ ಪಾಯಿಂಟ್‌ಗೆ ಹೋಗುವ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.