ಬೀದರ್: ರೈಲ್ವೆ ಗೇಟ್ ದಾಟಿ ಬಂದ ಲಾರಿಯೊಂದು ಹಳಿ ಮೇಲೇ ನಿಂತು ಬಿಟ್ಟಿದ್ದರಿಂದ ಎಕ್ಸ್ಪ್ರೆಸ್ ಟ್ರೇನ್ ಬಂದು ಅದಕ್ಕೆ ಅಪ್ಪಳಿಸಿದಂಥ ಅಪಘಾತವೊಂದು ಸಂಭವಿಸಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಈ ಅವಘಡ ಉಂಟಾಗಿದೆ.
ಭಾಲ್ಕಿ ತಾಲೂಕಿನ ಹಲಬುರ್ಗಾ ಬಳಿ ರೈಲು ಬರುವ ಸಮಯದೊಳಕ್ಕೆ ಹೋಗಿ ಬಿಡೋಣ ಎಂದುಕೊಂಡು ವೇಗವಾಗಿ ಬಂದ ಚಾಲಕ ಲಾರಿಯನ್ನು ನುಗ್ಗಿಸಿದ್ದಾನೆ. ಆದರೆ ಅಷ್ಟರಲ್ಲಿ ಮತ್ತೊಂದು ಭಾಗದಲ್ಲಿ ಎರಡನೇ ಗೇಟ್ ಹಾಕಲ್ಪಟ್ಟಿದ್ದರಿಂದ ಮುಂದಕ್ಕೆ ಹೋಗಲಾಗದೆ ಲಾರಿ ಹಳಿ ಮೇಲೇ ನಿಂತು ಬಿಟ್ಟಿದೆ.
ಅಪಾಯದ ಸುಳಿವನ್ನು ಅರಿತ ರೈಲ್ವೆ ಸಿಬ್ಬಂದಿ ಕೆಂಪು ನಿಶಾನೆ ತೋರಿದ್ದಾರೆ. ಹೀಗಾಗಿ ಎಕ್ಸ್ಪ್ರೆಸ್ ರೈಲು ನಿಧಾನಗೊಂಡಿತಾದರೂ ಹಳಿ ಮೇಲೆ ನಿಂತಿದ್ದ ಲಾರಿ ಅಪ್ಪಳಿಸಿ ಅದನ್ನು ಪಕ್ಕಕ್ಕೆ ಸರಿಸಿ ಸ್ವಲ್ಪ ಮುಂದಕ್ಕೆ ಹೋಗಿ ನಿಂತುಬಿಟ್ಟಿದೆ. ಅದೃಷ್ಟವಶಾತ್ ಸಂಭಾವ್ಯ ಭಾರಿ ಅಪಘಾತವೊಂದು ತಪ್ಪಿಹೋಗಿದೆ. ಲಾರಿ ಚಾಲಕನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Laxmi News 24×7