ಬೆಂಗಳೂರು: ಖಾಸಗಿ ಕಾಲೇಜಿನಲ್ಲಿ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ ವೈದ್ಯನನ್ನು ನಂಬಿಸಿ 1.16 ಕೋಟಿ ರೂ ಪಡೆದು ವಂಚಿಸಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 24 ಲಕ್ಷ ರೂ. ನಗದು, 25 ಗ್ರಾಂ ಚಿನ್ನಾಭರಣ ಹಾಗೂ ನಕಲಿ ವಾಕಿಟಾಕಿಗಳನ್ನು ಜಪ್ತಿ ಮಾಡಲಾಗಿದೆ.
ಕಲಬುರಗಿಯ ಆಳಂದ ಮೂಲದ ವೈದ್ಯ ಶಂಕರ್ ಬಾಬುರಾವ್ ನೀಡಿದ ದೂರಿನ ಮೇರೆಗೆ ವಂಚಕರಾದ ನಾಗರಾಜ್, ಮಲ್ಲಿಕಾರ್ಜುನ್, ಮಧು, ಬಸವರಾಜ್ ಹಾಗೂ ಹಮೀದ್ ಎಂಬುವವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪ್ರಕರಣದ ವಿವರ: ಕಲಬುರಗಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಶಂಕರ್ ತಮ್ಮ ಮಗನಿಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಎಂಬಿಬಿಎಸ್ ಸೀಟು ಕೊಡಿಸಲು ಪ್ರಯತ್ನಿಸುತ್ತಿದ್ದರು. ಹಲವು ಸಲ ಬೆಂಗಳೂರಿಗೆ ತಿರುಗಾಡಿದರೂ ಸೀಟು ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಎಂಟು ವರ್ಷಗಳಿಂದ ಪರಿಚಿತನಾಗಿದ್ದ ನಾಗರಾಜ್ ತನಗೆ ಮೆಡಿಕಲ್ ಕಾಲೇಜೊಂದರಲ್ಲಿ ಪರಿಚಯಸ್ಥರಿದ್ದಾರೆ, ಅಲ್ಲಿ ಮಗನಿಗೆ ಸೀಟು ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾನೆ.ಹೇಗೂ ಪರಿಚಯಸ್ಥನಾಗಿದ್ದರಿಂದ ಶಂಕರ್ ಇದನ್ನು ನಂಬಿ ಕಳೆದ ವರ್ಷ ಹಂತ ಹಂತವಾಗಿ 1.16 ಕೋಟಿ ಹಣ ಕೊಟ್ಟಿದ್ದಾರೆ.
ಬಳಿಕ ಎಂಬಿಬಿಎಸ್ ಸೀಟು ಕೊಡಿಸದೆ ಹಾಗೂ ಹಣವನ್ನೂ ನೀಡದೆ ನಾಗರಾಜ್ ಆಟ ಆಡಿಸಿದ್ದಾನೆ. ಕೆಲ ತಿಂಗಳ ಬಳಿಕ ಶಂಕರ್ ಅವರ ಒತ್ತಡ ತಾಳಲಾರದೆ, ಹಣ ನೀಡುವುದಾಗಿ ಬೆಂಗಳೂರಿಗೆ ಕರೆಯಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.