ಚಾಮರಾಜನಗರ, ಜೂನ್ 20: ಅರಣ್ಯ ಸಚಿವ ಉಮೇಶ್ ಕತ್ತಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರಾದರೂ, ಮಾಧ್ಯಮದವರಿಂದ ಅಂತರ ಕಾಯ್ದುಕೊಂಡು ಕಾಡು ಸುತ್ತಿದ್ದಾರೆ. ಜೊತೆಗೆ, ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ.
ಬಿಳಿಗಿರಿರಂಗನ ಬೆಟ್ಟ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಭಾನುವಾರ ವನ್ಯಜೀವಿ ಸಫಾರಿ ನಡೆಸಿದ್ದಲ್ಲದೇ, ಮಾನವ ವನ್ಯಜೀವಿ ಸಂಘರ್ಷ ತಡೆಗೆ ರೈಲು ಕಂಬಿಗಳು ಕೊರತೆ ಹಿನ್ನೆಲೆ ಬೇಲಿಗಳನ್ನು ಅಳವಡಿಸಲು ಮುಂದಾಗಿರುವುದಾಗಿ ತಿಳಿದುಬಂದಿದೆ.
ಸಚಿವರ ಖಾಸಗಿ ಭೇಟಿ ಇದಲ್ಲದಿದ್ದರೂ ಮಾಧ್ಯಮದಿಂದ ಅಂತರ ಏಕೆ ಕಾಯ್ದುಕೊಂಡರು? ಎಂದು ತಿಳಿದುಬಂದಿಲ್ಲ. ಅಧಿಕಾರಿಗಳು ಕೂಡ ಈ ಸಂಬಂಧ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಕಳೆದ ಎರಡು ಬಾರಿ ಭೇಟಿ ನೀಡಿದ ವೇಳೆ ಅತ್ಯಾಚಾರ, ಪಡಿತರ ವಿತರಣೆ ಹಾಗೂ ಬೆಳಗಾವಿ ವಿಭಜನೆ ಕುರಿತು ನೀಡಿದ್ದ ಹೇಳಿಕೆಗಳು ಭಾರೀ ಸದ್ದು ಮಾಡಿದ್ದವು. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಸುದ್ದಿ ಇದೆ.
ಏಡುಕುಂಡಲು ಎತ್ತಂಗಡಿ ಮಾಡದಂತೆ ಮನವಿ; ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರೈತರು ಭಾನುವಾರ ಕೆ.ಗುಡಿಯಲ್ಲಿ ಸಚಿವರನ್ನು ಭೇಟಿಯಾಗಿ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಗ್ರಾಮಗಳು ಮತ್ತು ಬಿಳಿಗಿರಿರಂಗನ ಬೆಟ್ಟದ ಪುರಾಣಿ ಪೋಡು ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಮನವಿ ಸಲ್ಲಿಸಿದರು.
ಇದರೊಟ್ಟಿಗೆ, ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಡಿಸಿಎಫ್ ಏಡುಕುಂಡಲು ಅವರನ್ನು ಮೂರು ವರ್ಷಗಳವರೆಗೆ ವರ್ಗಾವಣೆ ಮಾಡದೇ ಜಿಲ್ಲೆಯಲ್ಲೇ ಉಳಿಸಿಕೊಳ್ಳಬೇಕು, ಚಂಗಡಿ ಗ್ರಾಮಸ್ಥರನ್ನು ಸ್ಥಳಾಂತರಿಸಬೇಕೆಂದು ಮನವಿ ಮಾಡಿದರು. ಚಂಗಡಿ ಸ್ಥಳಾಂತರದ ಬಗ್ಗೆ ಗುರುವಾರದಂದು ವಿಧಾನಸೌಧಕ್ಕೆ ಬನ್ನಿ ಅಲ್ಲೇ ಕೆಲಸ ಮಾಡಿಕೊಡುತ್ತೇನೆ ಎಂದ ಕತ್ತಿ, ಡಿಸಿಎಫ್‌ರನ್ನು ಜಿಲ್ಲೆಯಲ್ಲೇ ಮುಂದುವರಿಸುವ ಭರವಸೆ ನೀಡಿದ್ದಾರೆ.