ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ವಿಷಯದಲ್ಲಿ ಬಿಜೆಪಿ ಎರಡು ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಪಟ್ಟಿಯಲ್ಲಿ ಇಲ್ಲದ ಹೆಸರು ಸೇರಿಸಿ, ಮತ್ತೊಂದು ಹೆಸರು ಕೈಬಿಡುವ ಮೂಲಕ ರಾಜ್ಯದ ಶಿಫಾರಸಿಗೆ ಮನ್ನಣೆಯಿಲ್ಲ ಎನ್ನುವುದನ್ನು ದೃಢಪಡಿಸಿದ್ದಾರೆ.
ಪಕ್ಷದ ವರಿಷ್ಠರ ಈ ನಡೆಯಲ್ಲಿ ಎಲ್ಲ ಜಾತಿಗಳಿಗೆ ಆದ್ಯತೆ ನೀಡಲಾಗುವುದು ಎಂಬ ಸಂದೇಶ ರವಾನೆ, ಮುಂಬರುವ ಚುನಾವಣೆಗಳ ತಂತ್ರಗಾರಿಕೆಯಿದೆ ಎಂದು ಮೂಲಗಳು ವಿಶ್ಲೇಷಿಸಿವೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಣೆ ಹಾಕಲಾಗಿದ್ದು, ಕರ್ನಾಟಕದಿಂದ ಎರಡನೇ ಬಾರಿ ರಾಜ್ಯಸಭೆ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ಉತ್ತರಪ್ರದೇಶದ 11 ಸದಸ್ಯರು ನಿವೃತ್ತರಾಗಲಿದ್ದು, ಸಂಖ್ಯಾಬಲದ ಪ್ರಕಾರ ಪಕ್ಷಕ್ಕೆ ಅತಿಹೆಚ್ಚು ಸ್ಥಾನಗಳು ಲಭ್ಯವಾಗುವ ಕಾರಣ ನಿರ್ಮಲಾ ಸೀತಾರಾಮನ್ ಅಲ್ಲಿಂದ ಆಯ್ಕೆಯಾಗಲಿದ್ದಾರೆ. ರಾಜ್ಯದ ಸ್ಥಾನವನ್ನು ರಾಜ್ಯದವರಿಗೇ ಬಿಟ್ಟುಕೊಡಲಿದ್ದು, ಇತರೆ ಹಿಂದುಳಿದ ವರ್ಗಗಳ ಮಹಿಳೆ ಮತ್ತು ಹೊಸ ಮುಖಕ್ಕೆ ಮಣೆ ಹಾಕಲಿದ್ದಾರೆ ಎಂಬ ಲೆಕ್ಕಾಚಾರ ತಲೆ ಕೆಳಗಾಗಿವೆ.
ಮೂಡದ ಒಮ್ಮತ: ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಕಾರ್ಯದರ್ಶಿ ಶ್ಯಾಮಲಾ ಕುಂದರ್ ಹೆಸರುಗಳು ಚಾಲ್ತಿಯಲ್ಲಿದ್ದವು. ವರಿಷ್ಠರಮಟ್ಟದಲ್ಲಿ ಈ ಬಗ್ಗೆ ಒಮ್ಮತ ಮೂಡದ ಕಾರಣ ನಿರ್ಮಲಾ ಸೀತಾರಾಮನ್ ಹೆಸರು ಅಂತಿಮವಾಯಿತು ಎಂದು ಮೂಲಗಳು ಹೇಳಿವೆ. ವಿಧಾನ ಪರಿಷತ್ ಚುನಾವಣೆ ಟಿಕೆಟ್ಗೆ ಬೇಡಿಕೆಯಿಟ್ಟಿದ್ದ ನಟ ಜಗ್ಗೇಶ್ಗೆ ದೆಹಲಿ ನಾಯಕರು ಬಂಪರ್ ಕೊಡುಗೆ ನೀಡಿದ್ದು, ರಾಜ್ಯಸಭೆ ಅಭ್ಯರ್ಥಿಯನ್ನಾಗಿಸಿ ಪಕ್ಷದ ರಾಜ್ಯ ನಾಯಕರನ್ನು ಮತ್ತೆ ಅಚ್ಚರಿ ಮಡುವಿಗೆ ತಳ್ಳಿದ್ದಾರೆ. ಕಾಂಗ್ರೆಸ್ನಿಂದ ವಲಸೆ ಬಂದಿದ್ದ ಉದ್ಯಮಿ ಕೆ.ಸಿ.ರಾಮಮೂರ್ತಿಗೆ ಅರ್ಧಚಂದ್ರ ಬಿದ್ದಿದೆ ಎಂದು ಮೇಲ್ನೋಟಕ್ಕೆ ಬಿಂಬಿತವಾಗಿದ್ದು, ಟಿಕೆಟ್ ನಿರಾಕರಿಸಿದ್ದರ ಹಿಂದೆ 2024ರ ಲೋಕಸಭಾ ಚುನಾವಣೆ ತಂತ್ರಗಾರಿಕೆಯಿದೆ. ಬೆಂಗಳೂರು ಉತ್ತರ ಅಥವಾ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣಾ ಕಣಕ್ಕೆ ಇಳಿಸಿ, ಪ್ರಬಲ ರೆಡ್ಡಿ ಸಮುದಾಯವನ್ನು ಸೆಳೆಯುವ ಚಿಂತನೆ ನಡೆಸಿದ್ದು, ರಾಮಮೂರ್ತಿಗೆ ತಿಳಿಸಿ ಒಪ್ಪಿಸಿದ್ದಾರೆ ಎಂದು ತಿಳಿದಿದೆ.