Breaking News

15 ದಿನ ಅಧಿಕಾರಿಗಳಿಗಿಲ್ಲ ರಜೆ; ಮುಖ್ಯಮಂತ್ರಿ ಕಟ್ಟಪ್ಪಣೆ: ಡಿಸಿ, ಸಿಇಒಗಳೊಂದಿಗೆ ವಿಡಿಯೋ ಸಂವಾದ

Spread the love

ಬೆಂಗಳೂರು: ರಾಜ್ಯದಲ್ಲಿ ಸುರಿದ ಭಾರಿ ಮಳೆ ಬಾಧಿತ ಪ್ರದೇಶದಲ್ಲಿ ಯುದ್ಧೋಪಾದಿ ತುರ್ತು ಕೆಲಸಗಳ ಜತೆಗೆ ಪರಿಹಾರ ವಿತರಿಸಬೇಕಾಗಿದ್ದು, ಯಾವುದೇ ಅಧಿಕಾರಿಗಳಿಗೆ ಮುಂದಿನ 15 ದಿನ ರಜೆ ಮಂಜೂರು ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟ್ಟಪ್ಪಣೆ ಮಾಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ವೇದಿಕೆ ಮೂಲಕ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳ ಜತೆಗೆ ಶನಿವಾರ ಸಭೆ ನಡೆಸಿದ ಅವರು, ಮಳೆ ಹಾನಿ ಪರಿಸ್ಥಿತಿ ಹಾಗೂ ಕೈಗೊಂಡ ಕ್ರಮಗಳನ್ನು ಪರಾಮಶಿಸಿದರು.

ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ತೊಂದರೆಗೆ ಒಳಗಾದ ಜನರ ನೆರವಿಗೆ ತಕ್ಷಣ ಧಾವಿಸುವ ಜತೆಗೆ ಎಲ್ಲ ಅನುಕೂಲತೆಗಳನ್ನು ಒದಗಿಸಬೇಕು. ಮುಂದಿನ ತಿಂಗಳು ಮುಂಗಾರು ಮಳೆ ಪ್ರವೇಶ ಸಾಧ್ಯತೆಯಿರುವ ಕಾರಣ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಸಮನ್ವಯಕ್ಕೆ ಒತ್ತು: ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಪ್ರತಿಯೊಂದು ಇಲಾಖೆಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಇಲಾಖೆಗಳ ಮಧ್ಯೆ ಸಮನ್ವಯ ಹಾಗೂ ಸಂವಹನ, ಕ್ಷಿಪ್ರಗತಿಯಲ್ಲಿ ಸ್ಪಂದನೆ ಅಷ್ಟೇ ಮುಖ್ಯವಾಗಿದೆ ಎಂದು ಸಲಹೆ ನೀಡಿದರು. ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಹೊಣೆ ಮಹತ್ವದ್ದಾಗಿದೆ. ಬೆಳೆ, ಮನೆ ಹಾನಿ ಸಮೀಕ್ಷೆ ಮಾಡುವಾಗ ಅನರ್ಹರು ಸೇರ್ಪಡೆಯಾಗದಂತೆ ಎಚ್ಚರಿಕೆವಹಿಸಬೇಕು. ಆಯಾ ಜಿಲ್ಲಾಧಿಕಾರಿಗಳು ಖುದ್ದಾಗಿ ಜಂಟಿ ಸಮೀಕ್ಷೆ ಕಾರ್ಯದ ಮೇಲ್ವಿಚಾರಣೆ ನಡೆಸಿ, ಸಕಾಲಕ್ಕೆ ವರದಿ ತರಿಸಿಕೊಂಡು ಮಾರ್ಗಸೂಚಿಯಂತೆ ಕ್ರಮಕೈಗೊಳ್ಳಬೇಕು ಎಂದರು.

ಪರಿಹಾರ ಬಿಡುಗಡೆ: ಎಲ್ಲ ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ ಒಟ್ಟು 728.85 ಕೋಟಿ ರೂ. ಅನುದಾನ ಲಭ್ಯವಿದ್ದು, ಹಾನಿ ಅನುಭವಿಸಿದವರಿಗೆ ಎನ್​ಡಿಆರ್​ಎಫ್ ನಿಯಮಗಳಂತೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಸೂಚಿಸಿದರು.

ಮುಂದಿನ ವಾರ ಎನ್​ಡಿಆರ್​ಎಫ್ ನಾಲ್ಕು ತಂಡಗಳು ರಾಜ್ಯಕ್ಕೆ ಬರಲಿವೆ. ಮುಂಗಾರು ಪ್ರವೇಶಕ್ಕೆ ಒಂದು ಮುಂಚೆಯೇ ಕಾರ್ಯಾಚರಣೆಗೆ ಸನ್ನದ್ಧವಾಗಿರುತ್ತವೆ. ಸರ್ಕಾರ ನಿಮ್ಮೊಂದಿಗಿರಲಿದ್ದು, ಏನೇ ಅಗತ್ಯವಿದ್ದರೂ ತಕ್ಷಣ ಸಂರ್ಪಸಿ ಸಮಸ್ಯೆ ಬಗೆಹರಿಸಬೇಕು ಎಂದರು. ಎನ್​ಡಿಆರ್​ಎಫ್ ಒಂದು ತಂಡ ಬೆಂಗಳೂರಿನಲ್ಲಿ ಕಾರ್ಯಾಚರಣೆಗೆ ಸದಾ ಸಿದ್ಧವಿರುತ್ತದೆ. ಉಳಿದ ನಾಲ್ಕು ತಂಡಗಳಿಗೆ ಕಾರ್ಯಾಚರಣೆ ಸ್ಥಳಗಳನ್ನು ಗೊತ್ತುಪಡಿಸಿದ್ದು, ಆಯಾ ಪ್ರದೇಶದ ಜನರಿಗೆ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ತಂಡ-1: ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಮತ್ತು ಸುತ್ತಮುತ್ತಲ ಪ್ರದೇಶ. ತಂಡ-2: ಕೊಡಗು, ಮೈಸೂರು, ಹಾಸನ, ಚಿಕ್ಕಮಗಳೂರು. ತಂಡ-3: ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಸುತ್ತಮುತ್ತಲ ಪ್ರದೇಶ. ತಂಡ-4: ರಾಯಚೂರು, ಯಾದಗಿರಿ, ಕಲಬುರ್ಗಿ, ಬಳ್ಳಾರಿ ಹಾಗೂ ಸುತ್ತಮುತ್ತಲ ಪ್ರದೇಶ.

ಸಿಎಂಗೆ ನಷ್ಟ-ಕಷ್ಟದ ವಿವರ: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾಗಿರುವ ನಷ್ಟ-ಕಷ್ಟದ ಬಗ್ಗೆ ಮುಖ್ಯಮಂತ್ರಿಗೆ ಅಧಿಕಾರಿಗಳು ವಿವರಿಸಿದ್ದಿಷ್ಟು; 12 ಜನ ಸಾವು, 430 ಜಾನುವಾರುಗಳು ಬಲಿ, 4,242 ಮನೆಗಳಿಗೆ ಭಾಗಶಃ ಹಾನಿ. 7010 ಹೆಕ್ಟೇರ್ ಕೃಷಿ ಹಾಗೂ 5736 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ನಷ್ಟವಾಗಿದೆ.


Spread the love

About Laxminews 24x7

Check Also

ಮದುವೆ ಪತ್ರಿಕೆ ಕೊಡುವ ನೆಪದಲ್ಲಿ ಬಂದ ದುಷ್ಕರ್ಮಿಗಳು: ಮಾಲೀಕರ ಕೈಕಾಲು ಕಟ್ಟಿ 200 ಗ್ರಾಂ ಚಿನ್ನ ಕದ್ದು ಎಸ್ಕೇಪ್

Spread the loveಮಂಗಳೂರು/ಬೆಂಗಳೂರು: ಪರಿಚಯವೇ ಇಲ್ಲದವರು ಮನೆಗೆ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಮನೆಗೆ ಬಂದು, ಹಾಡಹಗಲೇ ಮನೆ ಮಾಲೀಕರ ಕೈಕಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ