ಬೆಂಗಳೂರು/ ಮೈಸೂರು: ರಾಜ್ಯದ ಹಲವೆಡೆ ಗುರುವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ವಿವಿಧೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ಕೆರೆ ಏರಿಗಳು ಒಡೆದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿವೆ. ಕೃಷಿ ಜಮೀನಿನಲ್ಲಿ ನೀರು ನಿಂತು ಬೆಳೆಗಳು ಕೊಳೆಯಲಾರಂಭಿಸಿವೆ.
ಮಡಿಕೇರಿ- ಚಟ್ಟಳ್ಳಿ ರಸ್ತೆ ಬದಿಯ ನಾಲ್ಕು ಸ್ಥಳದಲ್ಲಿ ಮಣ್ಣು ಕುಸಿದು ಅಪಾಯದ ಮುನ್ಸೂಚನೆ ನೀಡುತ್ತಿದೆ.
ಸಿಡಿಲು ಬಡಿದು ಬೀದರ್ ತಾಲ್ಲೂಕಿನ ಚಿಮಕೋಡ ಗ್ರಾಮದ ರೈತ ಮಹಿಳೆ ವಿದ್ಯಾವತಿ ನರಸಪ್ಪ ಟೊಳ್ಳೆ (52) ಮತ್ತು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹೊರಟ್ಟಿ ಗ್ರಾಮದಲ್ಲಿ ರೈತ ಭೀಮಪ್ಪ ಕೊಡ್ಲಿ (62) ಮೃತಪಟ್ಟಿದ್ದಾರೆ. ಹುಣಸಗಿಯಲ್ಲಿ ಎಮ್ಮೆ ಮತ್ತು ಕೊಡೇಕಲ್ಲ ಗ್ರಾಮದಲ್ಲಿ ಕುರಿ ಸಿಡಿಲಿಗೆ ಬಲಿಯಾಗಿವೆ.
ಭಾರಿ ಮಳೆಯ ಕಾರಣ ಮೈಸೂರು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ದಾವಣಗೆರೆ ಮತ್ತು ಶಿವಮೊಗ್ಗದಲ್ಲಿಯೂ ಶುಕ್ರವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಗೆ ರಜೆ ಘೋಷಿಸಲಾಗಿದೆ.