Breaking News

ಕಮಲ ಕೋಟೆಯಲ್ಲಿ “ಕೈ’ ಕರಾಮತ್ತು

Spread the love

ಧಾರವಾಡ: ಏಳು ಸುತ್ತಿನ ಕೋಟೆ(ಏಳು ವಿಧಾನಸಭಾ ಕ್ಷೇತ್ರ) ಧಾರವಾಡ ಜಿಲ್ಲೆ 2008ರಿಂದ ಬಿಜೆಪಿ ಭದ್ರಕೋಟೆಯಾಗಿ ಮಾರ್ಪಾಟಾಗಿದ್ದರೂ ಕಾಂಗ್ರೆಸ್‌ 2013ರಲ್ಲಿ ಆರು ಸುತ್ತು ತನ್ನದಾಗಿಸಿಕೊಂಡು ಕೈಬಲ ತೋರಿಸಿತ್ತು. ಇದೀಗ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳನ್ನೂ ಗೆಲ್ಲಲೇಬೇಕೆನ್ನುವ ಲೆಕ್ಕಾಚಾರದಲ್ಲಿದೆ.

 

ಜೆಡಿಎಸ್‌ನಿಂದ ಜಿಲ್ಲೆಯಲ್ಲಿ ಖಾತೆ ತೆರೆದ ಕಟ್ಟಾಳು ಎನ್‌.ಎಚ್‌.ಕೋನರಡ್ಡಿ ಕೂಡ ಇದೀಗ ಕೈ ಹಿಡಿದಿದ್ದರಿಂದ ತೆನೆ ಹೊತ್ತ ಮಹಿಳೆಗೆ ಜಿಲ್ಲೆಯಲ್ಲಿ ಸಂಕಷ್ಟ ಎದುರಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಟಾನಿಕ್‌ ಆಗಿದ್ದ ಮಾಜಿ ಸಚಿವ ವಿನಯ್‌ ಕುಲಕರ್ಣಿ ಇಲ್ಲದೇ ಇರುವುದು ಒಂದರ್ಥದಲ್ಲಿ ಕೈ ಪಡೆಗೆ ದಂಡ ನಾಯಕ ಇಲ್ಲದಂತಾಗಿದೆ. ಬಿಜೆಪಿ ಮುಖಂಡರ ವಿರುದ್ಧ ಖಡಕ್‌ ಮಾತುಗಳು ಮತ್ತು ಎದೆಗಾರಿಕೆಯಿಂದ ರಾಜಕಾರಣ ಮಾಡುತ್ತಿದ್ದ ವಿನಯ್‌ ಕುಲಕರ್ಣಿ ಸದ್ಯಕ್ಕೆ ಜಿಲ್ಲೆಯ ಹೊರಗಿದ್ದುಕೊಂಡೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ನವಲಗುಂದ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದ ಎನ್‌.ಎಚ್‌.ಕೋನರಡ್ಡಿ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡುವುದು ಪಕ್ಕಾ ಎನ್ನುವ ನಂಬಿಕೆಯಲ್ಲಿ ಕೈ ಹಿಡಿದಿದ್ದಾರೆ. ಇಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಒಟ್ಟಾದರೆ ಬಿಜೆಪಿಯ ಸಚಿವ ಶಂಕರ ಪಾಟೀಲ ಮುನೇನಕೊಪ್ಪಗೆ ಪ್ರಬಲ ಪೈಪೋಟಿ ಪಕ್ಕಾ ಎನ್ನಲಾಗಿದೆ.

ಲಾಡ್‌ಗೆ ಟೆಂಗಿನಕಾಯಿ ಟಕ್ಕರ್‌: ಕಲಘಟಗಿಯಲ್ಲಿ ಸಂತೋಷ ಲಾಡ್‌ ಮತ್ತೆ ಆಯ್ಕೆಯಾಗಲು ಈಗಲೇ ಕಸರತ್ತು ಆರಂಭಿಸಿದ್ದಾರೆ. ಈ ಬಾರಿ ಕ್ಷೇತ್ರ ಬಿಟ್ಟು ಹೋಗದೆ ಇಲ್ಲಿಯೇ ಮೊಕ್ಕಾಂ ಹೂಡಿರುವ ಅವರು, ನಾನು ಬಳ್ಳಾರಿಗೆ ಹೋಗಲ್ಲ. ಕಲಘಟಗಿಯಿಂದಲೇ ಸ್ಪರ್ಧಿ ಸುವೆ ಎಂದು ಜನಪರ ಕೆಲಸಗಳಲ್ಲಿ ತೊಡಗಿದ್ದಾರೆ. ಬಿಜೆಪಿಯಿಂದ ಸಿ.ಎಂ.ನಿಂಬಣ್ಣವರ ಉತ್ತಮ ಕೆಲಸ ಮಾಡುತ್ತಿದ್ದರೂ ವಯೋಸಹಜತೆ ಯಿಂದಾಗಿ ಲಾಡ್‌ಗೆ ಪ್ರಬಲ ಪೈಪೋಟಿ ನೀಡಲು ಮಹೇಶ ಟೆಂಗಿನಕಾಯಿ ಅವರನ್ನು ಬಿಜೆಪಿ ಕಣಕ್ಕಿಳಿಸಲು ಯೋಚಿಸುತ್ತಿದೆ.

ಬೆಲ್ಲದ ವಿರುದ್ಧ ಯಾರು?: ಹು-ಧಾ ಪಶ್ಚಿಮ ಕ್ಷೇತ್ರ ಬಿಜೆಪಿ ಭದ್ರಕೋಟೆ. ಅರವಿಂದ ಬೆಲ್ಲದ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇವರ ವಿರುದ್ಧ ದಿ|ಎಸ್‌.ಆರ್‌. ಮೋರೆ, ಇಸ್ಮಾಯಿಲ್‌ ತಮಟಗಾರ ಸ್ಪರ್ಧಿಸಿದ್ದರೂ ಗೆಲ್ಲಲಿಲ್ಲ. ಕಾಂಗ್ರೆಸ್‌ನಲ್ಲಿ ಈ ಬಾರಿ ಅಲ್ಪಸಂಖ್ಯಾತರ ಬದಲು ಲಿಂಗಾಯತ ಸಮಾಜದ ಅಭ್ಯರ್ಥಿಗೆ ಟಿಕೆಟ್‌ ನೀಡಲು ಲೆಕ್ಕಾಚಾರ ನಡೆದಿದೆ.

ಕುಂದಗೋಳ ಕಥೆ ಏನು?: ಕುಂದಗೋಳದಲ್ಲಿ ಹಾಲಿ ಕಾಂಗ್ರೆಸ್‌ ಶಾಸಕಿ ಕುಸುಮಾವತಿ ಶಿವಳ್ಳಿ ಅವರಿದ್ದು, ನವಲಗುಂದದಲ್ಲಿ ಸ್ಪರ್ಧಿಸಿ ಸೋತಿರುವ ವಿನೋದ ಅಸೂಟಿ ಒಂದು ವೇಳೆ ಕೋನರಡ್ಡಿ ಅವರಿಗೆ ನವಲಗುಂದ ಕ್ಷೇತ್ರ ಬಿಟ್ಟು ಕೊಟ್ಟರೆ ಅವರಿಗೆ ಕುಂದಗೋಳ ಟಿಕೆಟ್‌ ನೀಡುವ ಲೆಕ್ಕಾಚಾರ ನಡೆದಿದೆ. ಇನ್ನು ಬಿಜೆಪಿ ಎಸ್‌.ಐ.ಚಿಕ್ಕನಗೌಡರ ಅಥವಾ ಹೊಸಮುಖಕ್ಕೆ ಮಣೆ ಹಾಕುವ ಚಿಂತನೆಯಲ್ಲಿದೆ.

ಶೆಟ್ಟರ ವಿರುದ್ಧ ಯಾರು?: ಹು-ಧಾ ಸೆಂಟ್ರಲ್‌ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ ವಿರುದ್ಧ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಕೈನಲ್ಲಿ ಇನ್ನೂ ನಿರ್ಧಾರವಾಗಿಲ್ಲ. ಕಾರಣ ಕಳೆದ ಬಾರಿ ಅವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದವರು ನಂತರ ಬಿಜೆಪಿ ಸೇರ್ಪಡೆಯಾದರು. ಆದರೂ ಯುವ ರಾಜಕಾರಣಿ ರಜತ್‌ ಉಳ್ಳಾಗಡ್ಡಿಮಠ ಸೇರಿದಂತೆ ಅನೇಕರು ಆಕಾಂಕ್ಷಿಗಳಿದ್ದಾರೆ. ಹು-ಧಾ ಪೂರ್ವದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಮತ್ತೆ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ಬಿಜೆಪಿಯಿಂದ ವೀರಭದ್ರಪ್ಪ ಹಾಲಹರವಿ ಸೇರಿದಂತೆ ಅನೇಕರು ಈ ಬಾರಿ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ತಪ್ಪಿದ ದೊಡ್ಡ ದುರಂತ

Spread the love ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ತಪ್ಪಿದ ದೊಡ್ಡ ದುರಂತ ಹುಬ್ಬಳ್ಳಿಯಲ್ಲಿ ನಿನ್ನೆ ಮಧ್ಯ ರಾತ್ರಿ ಎರಡು ಗಂಟೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ