ಬೆಂಗಳೂರು: ಅರಣ್ಯ ಇಲಾಖೆ ವಶದಲ್ಲಿರುವ 6 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ. ಈ ಭೂಮಿಯಲ್ಲಿ ಅಗತ್ಯವಿರುವಷ್ಟು ಸರ್ಕಾರದ ಬಳಿ ಉಳಿಸಿಕೊಂಡು ಉಳಿದ ಭೂಮಿಯನ್ನು ಒತ್ತುವರಿದಾರರಿಗೆ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.
ಅಶೋಕ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಕಂದಾಯ ಇಲಾಖೆಗೆ ಸುಮಾರು 6 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶ ಹಸ್ತಾಂತರವಾಗುತ್ತದೆ. ಇದನ್ನು ಸಾರ್ವಜನಿಕ ಉದ್ದೇಶದ ಬಳಕೆಗೆ ಮೀಸಲಿಡಲು ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಒತ್ತುವರಿದಾರರಿಗೂ ಭೂಮಿ ಹಂಚಿಕೆ ಮಾಡಲಿದ್ದು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಉತ್ತರಕನ್ನಡ, ಮೈಸೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಕಂದಾಯ ಇಲಾಖೆಗೆ ಹಸ್ತಾಂತರವಾಗಲಿರುವ ಅರಣ್ಯ ಭೂಮಿಯಲ್ಲಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ನಾಗರಿಕ ಅಗತ್ಯಗಳಿಗೆ ಸಾರ್ವಜನಿಕ ಬಳಕೆಗೆ 1 ಲಕ್ಷ ಹೆಕ್ಟೇರ್ ಭೂಮಿಯನ್ನು ಉಳಿಸಿಕೊಂಡು 5 ಲಕ್ಷ ಹೆಕ್ಟೇರ್ ನಷ್ಟು ಭೂಮಿಯನ್ನು ರೈತರಿಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
Laxmi News 24×7