ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮಂಗಳವಾರ(ಇಂದು) 26 ಹರೆಯಕ್ಕೆ ಕಾಲಿಟ್ಟಿದ್ದಾರೆ. ಈ ನಟಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಸೇರಿದಂತೆ ಸಿನಿರಂಗದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಶ್ಮಿಕಾ ಈ ಹುಟ್ಟು ಹಬ್ಬಕ್ಕೆ ವಿಶೇಷ ಎನ್ನುವಂತೆ ಇನ್ನೂ ಹೆಸರಿಡದ ಅವರ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ವೀಡಿಯೋದಲ್ಲಿ ರಶ್ಮಿಕಾ ಅಪರೂಪದ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಟಾಲಿವುಡ್ ಹೊಸ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರದಲ್ಲಿ ದಕ್ಷಿಣದ ನಟ, ನಿರ್ಮಾಪಕ ದುಲ್ಕರ್ ಸಲ್ಮಾನ್ ನಾಯಕನಾಗಿ ನಟಿಸುತ್ತಿದ್ದು, ಹನು ರಾಘವಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದುಲ್ಕರ್ ಅವರು ಲೆಫ್ಟಿನೆಂಟ್ ರಾಮ್ ಆಗಿ ಕಾಣಿಸಿಕೊಳ್ಳಲಿದ್ದು, ಮೃಣಾಲ್ ಠಾಕೂರ್ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹೊಸ ತಾರಾಬಳಗವನ್ನು ಪರಿಚಯಿಸಲಾಗಿದ್ದು, ರಶ್ಮಿಕಾ ಮಂದಣ್ಣ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಿನಿಮಾ ದ್ವಿಭಾಷೆಗಳಲ್ಲಿ ಮೂಡಿಬರಲಿದೆ.
ಈ ಚಿತ್ರದಲ್ಲಿ ರಶ್ಮಿಕಾ ಪಾತ್ರ ಡಿಫರೆಂಟ್ ಆಗಿದೆ ಎಂಬುದು ಪೋಸ್ಟರ್ ಅರ್ಥ ಮಾಡಿಸುತ್ತದೆ. ತಮ್ಮ ನೆಚ್ಚಿನ ತಾರೆಯ ಈ ಫೋಟೋ ನೋಡಿದ ರಶ್ಮಿಕಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಲ್ಲದೇ, ಸಿನಿಮಾ ಅಪ್ಡೇಟ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ