ತುಮಕೂರು: ಮನೆಯವರ ವಿರೋಧದ ನಡುವೆಯೂ ದೇವಸ್ಥಾನದಲ್ಲಿ ಪ್ರೇಯಸಿಯ ಕುತ್ತಿಗೆಗೆ ತಾಳಿ ಕಟ್ಟಿದ ಯುವಕ, ಜೀವನಪೂರ್ತಿ ನಿನ್ನೊಂದಿಗೇ ಇರುವೆ ಎಂದೂ ಮಾತೂ ಕೊಟ್ಟಿದ್ದ. ಇದಾದ ಮೂರು ದಿನಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಖುಷಿಯಾಗೇ ಮದುವೆ ನೋಂದಣಿ ಕೂಡ ಮಾಡಿಸಿಕೊಂಡ ಈ ಜೋಡಿ 6 ದಿನ ಸಂಸಾರವನ್ನೂ ನಡೆಸಿತ್ತು.
ಎಲ್ಲವೂ ಸುಸೂತ್ರವಾಗಿ ನೆರವೇರಿತು, ಪ್ರೀತಿಸಿದ ಹುಡುಗ ಜೀವನ ಪೂರ್ತಿ ಸಂಗಾತಿಯಾಗಿ ಇರ್ತಾನೆ… ಇನ್ನು ತಮ್ಮದೇ ಆದ ಬದುಕು ಕಟ್ಟಿಕೊಂಡು ನೆಲೆಯೂರಬೇಕು ಅಂದುಕೊಳ್ಳುವಷ್ಟರಲ್ಲಿ ಯುವತಿ ಬಾಳಲ್ಲಿ ನಡೆಯಬಾರದ್ದು ನಡೆದು ಹೋಗಿದೆ! ಪ್ರೀತಿಸಿ ಮದ್ವೆಯಾದ ಯುವತಿ ಬೀದಿಪಾಲಾಗಿದ್ದಾಳೆ.
ಏನಿದು ಪ್ರಕರಣ?: ತಿಪಟೂರು ತಾಲೂಕಿನ ಪರವಗೊಂಡನಹಳ್ಳಿ ಗ್ರಾಮದಲ್ಲಿ ನಿಖಿಲ್ ಮತ್ತು ಹಟ್ನ ಗ್ರಾಮದ ಚೈತ್ರಾ ಇಬ್ಬರೂ ತುರುವೇಕೆರೆಯ ಮೊಬೈಲ್ ಶಾಪ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪರಿಚಯ ತದನಂತರ ಪ್ರೀತಿಗೆ ತಿರುಗಿತ್ತು. ಇವರಿಬ್ಬರ ಜಾತಿ ಬೇರೆ ಬೇರೆ ಎಂದು ಪಾಲಕರು ಮದುವೆಗೆ ಒಪ್ಪಿಗೆ ಕೊಟ್ಟಿರಲಿಲ್ಲವಂತೆ. ಕೊನೆಗೆ ಇವರಿಬ್ಬರೂ ಮನೆಯವರ ವಿರೋಧದ ನಡುವೆಯೂ ಮನೆಯಿಂದ ಹೊರ ಬಂದು ಕಳೆದ ಫೆಬ್ರವರಿ 4ರಂದು ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಫೆಬ್ರವರಿ 7ರಂದು ರಿಜಿಸ್ಟ್ರಾರ್ ಮ್ಯಾರೇಜ್ ಕೂಡ ಆಗಿದ್ದರು. ತಿಪಟೂರು ತಾಲೂಕು ಕಿಬ್ಬನಳ್ಳಿ ಬಳಿಯ ಇಂಡಿಸ್ಕೆರೆ ಗ್ರಾಮದಲ್ಲಿ ಮನೆ ಮಾಡಿದ್ದ ಪ್ರೇಮಿಗಳಿಬ್ಬರೂ 6 ದಿನ ಒಟ್ಟಿಗೆ ವಾಸವಿದ್ದರು. ಮದ್ವೆಯಾದ 7ನೇ ದಿನಕ್ಕೆ ಯುವಕ ಎಸ್ಕೇಪ್ ಆಗಿದ್ದಾನೆ!