ಬಾಗಲಕೋಟೆ: ಈ ಊರಲ್ಲಿನ ಅಂತಿಮ ದಿನದಂದು ನಡೆದ ಹೋಳಿಯಾಟ ಅಕ್ಷರಶಃ ರಕ್ತದೋಕುಳಿ ಎಂಬಂತಾಗಿದೆ. ಏಕೆಂದರೆ ಹೋಳಿಯಾಟದಲ್ಲಿ ತೊಡಗಿದ್ದವರ ಪೈಕಿ ಇಬ್ಬರಿಗೆ ಚೂರಿ ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.
ಬಾಗಲಕೋಟೆಯಲ್ಲಿ ಮೂರು ದಿನ ಹೋಳಿ ಹಬ್ಬ ಆಚರಣೆ ಇದ್ದು, ಇಂದು ಮೂರನೇ ದಿನ ಹೋಳಿ ಆಡುವ ಸಂದರ್ಭ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ.
ಬಣ್ಣ ಎರಚುವ ವಿಚಾರದಲ್ಲಿ ಉಂಟಾದ ಗಲಾಟೆ ಹಲ್ಲೆಯವರೆಗೂ ತಲುಪಿದೆ.
ಹೋಳಿಯಾಡುತ್ತಿದ್ದ ಅವಿನಾಶ್ (24) ಮತ್ತು ಬಸವರಾಜ (22) ಈ ಘರ್ಷಣೆ ವೇಳೆ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರಲ್ಲೂ ಅವಿನಾಶ್ ತುಟಿ ಹಾಗೂ ಕಣ್ಣಿನ ಭಾಗಕ್ಕೆ ಚೂರಿಯಿಂದ ಇರಿದಿದ್ದರೆ, ಬಸವರಾಜನ ಕೆನ್ನೆಗೆ ಚಾಕುವಿನಿಂದ ಗಾಯಗೊಳಿಸಲಾಗಿದೆ. ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆ ಮಡುವಿನ ಓಣಿ ಬಳಿ ಘಟನೆ ಸಂಭವಿಸಿದ್ದು, ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.