ಬೆಳಗಾವಿ : ಆಡಳಿತವನ್ನು ಜನರ ಮನೆಬಾಗಿಲಿಗೆ ತೆಗೆದುಕೊಂಡು ಹೋಗುವ ಸರ್ಕಾರದ ಆಶಯದಂತೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಕೃಷ್ಣಾ ಹೊಳೆದಂಡೆಯ ಕಾಗವಾಡ ತಾಲೂಕಿನ ಮೋಳವಾಡ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿದರು.
ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯನ್ನು ಗ್ರಾಮದ ಹಿರಿಯರು ಅಲಂಕೃತ ಎತ್ತಿನ ಬಂಡಿಯಲ್ಲಿ ಬರಮಾಡಿಕೊಂಡರು. ಝಾಂಜ್, ಡೊಳ್ಳು, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಮಹಾಲಕ್ಷ್ಮಿ ಮಂದಿರದವರೆಗೆ ಜಿಲ್ಲಾಧಿಕಾರಿಯನ್ನು ಕರೆದೊಯ್ದರು.
ಗ್ರಾಮದ ಮಹಾದೇವ ಮಂದಿರದ ಬಳಿ ಎತ್ತಿನ ಬಂಡಿಯಿಂದ ಕೆಳಗಿಳಿದ ಜಿಲ್ಲಾಧಿಕಾರಿಗಳು ಸ್ವತಃ ಡೊಳ್ಳು ಬಾರಿಸಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸಾಥ್ ನೀಡಿದರು.
ಇದೇ ವೇಳೆ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಕ್ಕದ ಬೀರದೇವರ ದರ್ಶನ ಪಡೆದುಕೊಂಡರು. ಇದಾದ ಬಳಿಕ ಜೈನ ಬಸದಿಗೆ ಕೂಡ ತೆರಳಿದರು. ಮೋಳವಾಡದ ಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿಗಳು ಗ್ರಾಮ ಸಂಚಾರವನ್ನು ಆರಂಭಿಸಿದರು. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಬಳಿಕ ಗ್ರಾಮಸ್ಥರ ಅಹವಾಲುಗಳನ್ನು ಕೇಳಿದರು.
2019ರ ಪ್ರವಾಹ ಸಂದರ್ಭದಲ್ಲಿ ಮುಳುಗಡೆಯಾಗಿದ್ದ ಪ್ರದೇಶಗಳ ಕುರಿತು ಜನರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ವಿಕಲಚೇತನ ಬಾಲಕ ಪ್ರಜ್ವಲ್ ರಾಮು ಬಾಳಿಕಾಯಿ ಅವರ ಪಾಲಕರೊಂದಿಗೆ ಮಾತನಾಡಿದರು. ಮಗ ಬುದ್ಧಿಮಾಂಧ್ಯನಾಗಿದ್ದು, ತಂದೆ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಕೂಡಲೇ ಮನೆಯನ್ನು ಕಟ್ಟಿಸಿಕೊಡುವಂತೆ ಬಾಲಕನ ತಂದೆ ಮನವಿ ಮಾಡಿಕೊಂಡರು.
Laxmi News 24×7