ಮತ ಎಣಿಕೆ ಅಧಿಕಾರಿಗಳ ಮೇಲೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಪ್ರತಿಯೊಬ್ಬರೂ ಮತ ಎಣಿಕೆ ವಿಧಾನ ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಎಣಿಕೆ ಪ್ರಕ್ರಿಯೆ ನಡೆಸಬೇಕು ಎಂದು ಚುನಾವಣಾ ವೀಕ್ಷಕರಾದ ಹಿರಿಯ ಐಎಎಸ್ ಅಧಿಕಾರಿ ಏಕರೂಪ್ ಕೌರ್ ಅವರು ತಿಳಿಸಿದರು.
ವಿಧಾನಪರಿಷತ್ ಚುನಾವಣೆಯ ಮತ ಎಣಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತ ಎಣಿಕೆಯಲ್ಲಿ ಯಾವುದೇ ಗೊಂದಲಗಳನ್ನು ಸೃಷ್ಟಿಸಿಕೊಳ್ಳಬಾರದು. ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಮತ ಎಣಿಕೆಯು ಸುಗಮವಾಗಿ ಸಾಗುವಂತೆ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು
ಮತ ಎಣಿಕೆ ಕುರಿತು ತರಬೇತಿ ನೀಡಿದ ಮಾಸ್ಟರ್ ಟ್ರೇನರ್ ಎನ್.ವಿ.ಶಿರಗಾಂವಕರ ಅವರು, “1 ರಿಂದ 14 ಕೌಂಟಿಂಗ್ ಟೇಬಲ್ ಗಳಿರುತ್ತವೆ. ಪ್ರತಿ ಟೇಬಲ್ ಗೆ 36 ರೌಂಡ್ ಗಳು ಇರುತ್ತವೆ. ಕೆಲ ಟೇಬಲ್ ಗಳಿಗೆ ಮಾತ್ರ ಒಂದು ಹೆಚ್ಚುವರಿ ರೌಂಡ್ ಬರುತ್ತದೆ” ಎಂದು ತಿಳಿಸಿದರು.
ಮೈಕ್ರೋ ಅಬ್ಸರ್ವರ್ ಗಳಾಗಿ ನೇಮಿಸಲಾದ ಅಧಿಕಾರಿಗಳು ಮತ ಎಣಿಕೆ ಸಮಯದಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ತೆಗೆದುಕೊಂಡು ಬರಬೇಕು. ಮತ ಎಣಿಕೆಗೆ ನಿಗದಿ ಪಡಿಸಿದ ಸಮಯಕ್ಕೆ ಮುಂಚಿತವಾಗಿ ಕರ್ತವ್ಯಕ್ಕೆ ಹಾಜರಾಗಬೇಕು.
ಒಟ್ಟು 511 ಮತಗಟ್ಟೆಗಳಿವೆ ಬೆಳಿಗ್ಗೆ 8 ರಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಕೌಂಟಿಂಗ್ ಮೇಲ್ವಿಚಾರಕ ಮತ್ತು ಸಹಾಯಕರ ನೇಮಕ ಮಾಡಲಾಗುವುದು. ಬ್ಯಾಲೆಟ್ ಬಾಕ್ಸ್ ಮತ ಪತ್ರಗಳ ಅಂಕಿ ಅಂಶಗಳ ಕುರಿತು ಆರ್. ಓ ಅವರಿಗೆ ಮಾಹಿತಿ ನೀಡಬೇಕು ತಿಳಿಸಿದರು.