2021ನೇ ಸಾಲಿನ ಐಟಿ ನಿಯಮಾವಳಿಗಳು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಬಗ್ಗೆ ಸ್ಪಷ್ಟ ಗಮನವನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ ಗೆ ಮಾಹಿತಿಯನ್ನು ರವಾನಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಜ್ಯೋತಿ ಸಿಂಗ್ ನೇತೃತ್ವದ ಪೀಠಕ್ಕೆ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರ್ಕಾರವು ಐಟಿ ಹೊಸ ನಿಯಮಾವಳಿಗಳು ಅಶ್ಲೀಲತೆ ಹಾಗೂ ಭೌತಿಕ ಗೌಪ್ಯತೆಯನ್ನು ಉಲ್ಲಂಘಿಸುವಂತಹ ವಿಷಯಗಳನ್ನು ತೆಗೆದು ಹಾಕಲಿದೆ ಎಂದು ಹೇಳಿದೆ.
‘ಐಟಿ ಹೊಸ ನಿಯಮಾವಳಿಗಳು ಕಂಪ್ಯೂಟರ್ ಮೂಲಗಳಿಂದ ಅವನ ಅಥವಾ ಅವಳ ಘನತೆಯ ಮೇಲೆ ನಕರಾತ್ಮಾಕ ಪರಿಣಾಮ ಬೀರಬಲ್ಲ ಅಂಶಗಳನ್ನು ನಿಯಂತ್ರಿಸುತ್ತದೆ. 24 ಗಂಟೆಗಳ ಅವಧಿಯಲ್ಲಿ ವಿಷಯಗಳನ್ನು ಅಳಿಸಿ ಹಾಕುವುದರಿಂದ ಸೆನ್ಸಾರ್ ಶಿಪ್ ಆಗೋದಿಲ್ಲ. ಇದನ್ನು ಸೂಕ್ಷ್ಮವಾಗಿ ನೋಡಬೇಕು. ಹಾಗೂ ಇದೇ ನಮ್ಮ ಆದ್ಯತೆಯಾಗಿದೆʼ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆನ್ಲೈನ್ನಲ್ಲಿ ಖಾಸಗಿ ದೃಶ್ಯಗಳು ಸೋರಿಕೆಯಾದ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗಾಗಿ ನಿಯಮ 3(2)(b) ಯನ್ನು ನೀಡಲಾಗಿದೆ. ಈ ನಿಯಮದಿಂದಾಗಿ ಕಂಪ್ಯೂಟರ್ ಮೂಲಗಳಲ್ಲಿ ಸಿಗುವ ಭಾಗಶಃ ನಗ್ನ ಚಿತ್ರಗಳನ್ನು ತೆಗೆದು ಹಾಕಲಾಗುತ್ತದೆ. ಸಂತ್ರಸ್ತರು ನೀಡಿದ ದೂರನ್ನು ಆಧರಿಸಿ ಬಳಕೆದಾರರ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
Laxmi News 24×7