ಶಿಕಾರಿಪುರ : ‘ನನ್ನ ಆಪ್ತ ಸಹಾಯಕ ಉಮೇಶ್ ಅವರ ನಿವಾಸದ ಮೇಲೆ ಐಟಿ ದಾಳಿಯಾಗಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ‘ನಾಳೆ ಅಧಿಕಾರಿಗಳು ಐಟಿ ದಾಳಿಯ ಕುರಿತು ಮಾಹಿತಿ ನೀಡಲಿದ್ದಾರೆ.ಆ ಬಳಿಕ ನಾನು ಉತ್ತರ ನೀಡುತ್ತೇನೆ. ಯಾರೇ ತಪ್ಪು ಮಾಡಿದರು ಐಟಿ ಅಧಿಕಾರಿಗಳು ಬಿಡುವುದಿಲ್ಲ, ಅವರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದರು.
‘ಇದೊಂದು ರಾಜಕೀಯ ಪ್ರೇರಿತ ಐಟಿ ದಾಳಿ’ ಅನ್ನುವುದನ್ನು ಅಲ್ಲಗೆಳೆದ ಬಿಎಸ್ ವೈ,ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ.ಎರಡೂ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಆಪ್ತ ಸಹಾಯಕ ಉಮೇಶ್ ಅವರ ರಾಜಾಜಿನಗರದ ಮನೆಯ ಮೇಲೆ ಗುರುವಾರ ಐಟಿ ದಾಳಿ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಉಮೇಶ್ . ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದರು. ಯಡಿಯೂರಪ್ಪ ಅವರ ಪುತ್ರರಾದ ಬಿ. ವೈ. ವಿಜಯೇಂದ್ರ ಹಾಗೂ ರಾಘವೇಂದ್ರ ಬಳಿಯೂ ಆಪ್ತರಾಗಿ ಗುರುತಿಸಿಕೊಂಡಿದ್ದರು. ಉಮೇಶ್ ಮನೆಮಾತ್ರವಲ್ಲದೆ ಅವರ ಆಪ್ತರ ಮನೆಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
Laxmi News 24×7