Breaking News

ಬೆಂಗಳೂರಿನ ಕಾರು ಅಪಘಾತ ಪ್ರಕರಣ: ಬಾರ್‌ನಲ್ಲಿ ಮದ್ಯ ಖರೀದಿ, ಕಾರಿನಲ್ಲೇ ಪಾರ್ಟಿ

Spread the love

ಬೆಂಗಳೂರು: ಕೋರಮಂಗಲದ 80 ಅಡಿ ರಸ್ತೆಯಲ್ಲಿ ಔಡಿ ಕ್ಯೂ3 ಕಾರು ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟ ಪ್ರಕರಣದ ಕುರಿತು ಆಗ್ನೇಯ ವಿಭಾಗದ (ಸಂಚಾರ) ಎಸಿಪಿ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದೆ. ಮೃತರು ಓಡಾಡಿದ್ದ ಸ್ಥಳಗಳ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದೆ.

‘ಕಾರು ಚಾಲಕನ ಅತಿವೇಗದ ಚಾಲನೆ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಚಾಲಕನ ವಿರುದ್ಧವೇ ಪ್ರಕರಣ ದಾಖಲಾಗಿದೆ. ಕಾರಿನಲ್ಲಿದ್ದ ಏಳು ಮಂದಿಯೂ ಮೃತಪಟ್ಟಿದ್ದಾರೆ. ಹೀಗಾಗಿ, ಅಪಘಾತ ಹೇಗಾಯಿತು ಎಂಬುದನ್ನು ಸದ್ಯಕ್ಕೆ ಹೇಳಲಾಗದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್ ಅವರ ಮಗ ಕರುಣಾಸಾಗರ್, ಅವರ ಸಂಬಂಧಿ ಬಿಂದು, ಸ್ನೇಹಿತರಾದ ಇಷಿತಾ ಬಿಸ್ವಾಸ್, ಎಂ.ಧನುಷಾ, ಅಕ್ಷಯ್ ಗೋಯಲ್, ಉತ್ಸವ್ ಹಾಗೂ ರೋಹಿತ್ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಅವರೆಲ್ಲರ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ವೈದ್ಯರ ವರದಿಗಾಗಿ ಕಾಯುತ್ತಿದ್ದೇವೆ’ ಎಂದೂ ತಿಳಿಸಿದರು.

‘ಇಬ್ಬರು ಯುವತಿಯರು, ಸೋಮವಾರ ರಾತ್ರಿ ಕೋರಮಂಗಲದ ಬಾರೊಂದಕ್ಕೆ ಹೋಗಿ ಮದ್ಯ ಖರೀದಿಸಿದ್ದರು. ಬಾರ್‌ನಿಂದ ಹೊರಬಂದ ಅವರನ್ನು ಕರುಣಾಸಾಗರ್ ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಸ್ಥಳದಿಂದ ಹೊರಟು ಹೋಗಿದ್ದರು. ಇದಕ್ಕೆ ಸಂಬಂಧಪಟ್ಟ ದೃಶ್ಯಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ಹೇಳಿದರು.

‘ಕರ್ಫ್ಯೂ ಇದ್ದಿದ್ದರಿಂದ ಬಾರ್‌ನಲ್ಲಿ ಕುಳಿತು ಮದ್ಯ ಕುಡಿಯಲು ಅವಕಾಶವಿರಲಿಲ್ಲ. ಹೀಗಾಗಿ, ತಾವು ತಂದಿದ್ದ ಮದ್ಯವನ್ನು ಏಳು ಮಂದಿಯೂ ಕಾರಿನಲ್ಲೇ ಕುಡಿದು ಪಾರ್ಟಿ ಮಾಡಿದ್ದಾರೆ. ಅದಾದ ನಂತರ, ಕಾರಿನಲ್ಲಿ ನಗರದ ಹಲವೆಡೆ ಸುತ್ತಾಡಿದ್ದರು. ಅವಾಗಲೂ ಕಾರನ್ನು ಅತಿವೇಗದಲ್ಲಿ ಚಲಾಯಿಸಿದ್ದರು. ಹೊಸೂರು ರಸ್ತೆಯ ಚೆಕ್‌ಪೋಸ್ಟ್‌ನಲ್ಲಿದ್ದ ಆಡುಗೋಡಿ ಠಾಣೆ ಸಿಬ್ಬಂದಿ, ಕಾರು ತಡೆದು ಪರಿಶೀಲಿಸಿದ್ದರು. ಶಾಸಕನ ಮಗನೆಂದು ಹೇಳಿ ಕರುಣಾಸಾಗರ್ ಕಾರು ಬಿಡಿಸಿಕೊಂಡು ಹೋಗಿದ್ದರು. ಅತಿವೇಗದಲ್ಲಿ ಕಾರು ಚಲಾಯಿಸದಂತೆ ಬುದ್ಧಿವಾದ ಹೇಳಿ ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಇದಾದ ನಂತರ ಅಪಘಾತ ಸಂಭವಿಸಿದೆ’ ಎಂದೂ ತಿಳಿಸಿದರು.

‘ಕೋರಮಂಗಲ ರಸ್ತೆಯಲ್ಲಿ ಹೊರಟಿದ್ದ ಆಹಾರ ಡೆಲಿವರಿ ಬಾಯ್‌ ಸಹ ಕಾರಿನ ಅತಿವೇಗದ ಬಗ್ಗೆ ಹೇಳಿಕೆ ನೀಡಿದ್ದಾರೆ. ತಮ್ಮ ದ್ವಿಚಕ್ರ ವಾಹನದ ಬಳಿಯೇ ಕಾರು ಅತಿವೇಗವಾಗಿ ಹೋಗಿತ್ತು. ಅದನ್ನು ನೋಡಿ ತಮಗೂ ಭಯವಾಗಿತ್ತೆಂದೂ ಅವರು ತಿಳಿಸಿದ್ದಾರೆ’ ಎಂದೂ ಮಾಹಿತಿ ನೀಡಿದರು.

ಜಂಟಿ ಸಮಿತಿ ಸದಸ್ಯರ ಭೇಟಿ: ಲೋಕೋಪಯೋಗಿ, ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಜಂಟಿ ಸಮಿತಿ ಸದಸ್ಯರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

‘ಅಪಘಾತಕ್ಕೆ ಅತಿವೇಗ ಕಾರಣವೆಂಬುದು ಮೇಲ್ನೋಟಕ್ಕಷ್ಟೇ ಹೇಳಲಾಗುತ್ತದೆ. ಆದರೆ,‌ ಘಟನೆಗೆ ನಿಖರ ಕಾರಣವೇನು ಎಂಬುದನ್ನು ತಿಳಿಯಬೇಕಿದೆ. ಹೀಗಾಗಿ, ಸ್ಥಳಕ್ಕೆ ಭೇಟಿ ನೀಡಿ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ವೈಜ್ಞಾನಿಕವಾಗಿ ತನಿಖೆ ಮಾಡಿ ವರದಿ ಸಲ್ಲಿಸಲಾಗುವುದು’ ಎಂದೂ ಸಮಿತಿ ಮೂಲಗಳು ಹೇಳಿವೆ.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ