ಕೊಪ್ಪಳ: 15 ವರ್ಷಗಳ ಹಿಂದೆ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿಸಿ ಮುಚ್ಚಿ ಹಾಕಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಶಂಕರ್‍ಸಿಂಗ್ ಮೃತ ವ್ಯಕ್ತಿ. ಬಂಧಿತ ಆರೋಪಿಗಳನ್ನು ಗಂಗಾವತಿಯ ವಿರುಪಾಪೂರ ನಗರದ ಮೃತನ ಪತ್ನಿ ಲಕ್ಷ್ಮೀಸಿಂಗ್, ರಾಂಪೂರ ಪೇಟೆಯ ಅಮ್ಜದ್‍ಖಾನ್, ಕಿಲ್ಲಾ ಏರಿಯಾದ ಅಬ್ದುಲ್ ಹಫೀಜ್, ಬಾಬಾ ಜಾಕೀರಬಾಷಾ ಹಾಗೂ ಈಳಿಗನೂರ ಗ್ರಾಮದ ಶಿವನಗೌಡ ಎಂದು ಗುರುತಿಸಲಾಗಿದೆ. ಮೃತನ ಮಗಳು ತನ್ನ ತಂದೆಯ ಕೊಲೆಯ ರಹಸ್ಯವನ್ನು ಬಹಿರಂಗಪಡಿಸಿದ್ದಾಳೆ.
ಅನೈತಿಕ ಸಂಬಂಧಕ್ಕೆ ಪತಿಯ ಕೊಲೆ:
ಮೃತ ಶಂಕರ್‍ಸಿಂಗ್‍ನನ್ನು ಹಲವಾರು ವರ್ಷಗಳ ಹಿಂದೆಯೇ ಆರೋಪಿ ಲಕ್ಷ್ಮೀಸಿಂಗ್ ಮದುವೆಯಾಗಿದ್ದಳು. ವಿವಾಹ ನಂತರ ಲಕ್ಷ್ಮೀಸಿಂಗ್ ಅಮ್ಜದ್‍ಖಾನ್, ಅಬ್ದುಲ್ ಹಫೀಜ್ ಮತ್ತು ಬಾಬಾ ಜಾಕೀರಬಾಷಾ ಇವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಪತಿ ಶಂಕರ್‍ಸಿಂಗ್‍ಗೆ ಗೊತ್ತಾಗಿ ಪತ್ನಿಗೆ ಹೊಡೆದು ಎಚ್ಚರಿಗೆ ನೀಡಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಆತನನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅದರಂತೆಯೇ 2005ರಲ್ಲಿ ಆಗಸ್ಟ್ ತಿಂಗಳ ಒಂದು ದಿನ ಶಂಕರಸಿಂಗ್‍ಗೆ ಚಹಾದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಟ್ಟು ಮಲಗಿಸಿದ್ದಾಳೆ. ಆಗ ಆರೋಪಿಗಳು ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಆತನ ಕೈ-ಕಾಳುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಮನೆಯ ಪಕ್ಕದಲ್ಲಿ ಖಾಲಿಯಿದ್ದ ಸ್ಥಳದಲ್ಲಿ ಸಮಾಧಿ ಮಾಡಿಸಿದ್ದಾಳೆ.
2015ರಲ್ಲಿ ಅಸ್ಥಿ ಪಂಜರ ಪತ್ತೆ:
ಗಂಗಾವತಿಯ ಜಯನಗರದಲ್ಲಿ ಕೊಲೆಯನ್ನು ಮಾಡಿ ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ದೇಹವನ್ನು ಮುಚ್ಚಿ ಹಾಕಿದ್ದರು. ನಂತರ 2015ರಲ್ಲಿ ಆ ಖಾಲಿ ನಿವೇಶನವನ್ನು ಈಳಿಗನೂರ ಗ್ರಾಮದ ಶಿವನಗೌಡನಿಗೆ ಮಾರಾಟ ಮಾಡಿದ್ದಾಳೆ. ಮನೆ ಖರೀದಿ ಮಾಡಿದ ಶಿವನಗೌಡ ಮನೆಯನ್ನು ಕಟ್ಟಿಸುತ್ತಿರುವ ವೇಳೆಯಲ್ಲಿ ಶವದ ಮೂಳೆಗಳು ಪತ್ತೆಯಾಗಿವೆ. ಮೂಳೆಗಳು ಸೇರಿದಂತೆ ಬಟ್ಟೆ ಹಾಗೂ ದೇಹದ ಮೇಲಿದ್ದ ಇತರ ವಸ್ತುಗಳಿಂದ ನಮ್ಮ ತಂದೆ ಎಂದು ಮಕ್ಕಳು ಗುರುತಿಸಿದ್ದಾರೆ. ಆಗ ಮಗಳು ತನ್ನ ತಾಯಿಯನ್ನು ವಿಚಾರಿಸಿದಾಗ ಅಮ್ಜದ್‍ಖಾನ್, ಅಬ್ದುಲ್ ಹಫೀಜ್ ಮತ್ತು ಬಾಬಾ ಜಾಕೀರಬಾಷಾ ಸೇರಿ ಕೊಲೆ ಮಾಡಿ ತಾನೇ ಸಮಾಧಿ ಮಾಡಿರುವುದಾಗಿ ಹೇಳಿದ್ದಾಳೆ. ಈ ವಿಚಾರ ಮಕ್ಕಳಿಗೆ ಗೊತ್ತಾಗಿದ್ದರಿಂದ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಮರುದಿನ ಶವದ ಮೂಳೆಗಳನ್ನು ಸುಟ್ಟು ಹಾಕಿ ಸಾಕ್ಷಿ ನಾಶ ಮಾಡಿದ್ದಾರೆ. ಅಲ್ಲದೇ ಮಗಳ ಫೋನಿನಲ್ಲಿದ್ದ ಅಸ್ಥಿಪಂಜರದ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದಾಳೆ.
ಮಗಳ, ತಾಯಿ ಗಲಾಟೆಯಲ್ಲಿ ಪ್ರಕರಣ ಬಯಲಿಗೆ:
ಸುಮಾರು 5 ವರ್ಷಗಳ ನಂತರ ಇತ್ತೀಚೆಗೆ ಆರೋಪಿ ಲಕ್ಷ್ಮೀಸಿಂಗ್ ಮತ್ತು ಮೃತನ ಮಗಳ ಮಧ್ಯೆ ಜಗಳ ನಡೆದಿದೆ. ಆಗ ಆರೋಪಿ ತಾಯಿ ಅನಾಚ್ಯ ಶಬ್ದದಿಂದ ಬೈದು, ಹೊಡೆದು, ನಿಮ್ಮ ಅಪ್ಪನಿಗೆ ಮಾಡಿದಂತೆ ನಿನಗೂ ಒಂದು ಗತಿ ಕಾಣಿಸುತ್ತೇನೆ ಎಂದು ಹೆದರಿಸಿದ್ದಾಳೆ. ಇದರಿಂದ ಭಯಗೊಂಡ ಮಗಳು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಅಲ್ಲದೇ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ತನಿಖೆಯನ್ನು ನಡೆಸಿ, ಒಟ್ಟು 4 ಜನ ಕೊಲೆ ಮಾಡಿರುವ ಆರೋಪಿಗಳನ್ನು ಹಾಗೂ ಶವದ ಮೂಳೆಗಳನ್ನು ಸುಟ್ಟು ಸಾಕ್ಷಿ ನಾಶ ಪಡಿಸಿರುವ ಶಿವನಗೌಡ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿ.ಸಂಗೀತಾ ತಿಳಿಸಿದ್ದಾರೆ.