ಕಾರವಾರ: ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖಗೊಂಡು ಮತ್ತೆ ಹೊಸ ಜೀವನ ಪಡೆದುಕೊಂಡ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಇಬ್ಬರು ನಿವಾಸಿಗಳು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆಯೇ ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ರೋಗಿ ಸಂಖ್ಯೆ 36 ಹಾಗೂ ಇಂದು ಡಿಸ್ಚಾರ್ಜ್ ಆಗಿರುವ ಸೋಂಕಿತ ರೋಗಿ ಸಂಖ್ಯೆ 98 ಮತ್ತೆ ಆರೋಗ್ಯವಂತರಾಗಿ ಮರಳಿರುವುದಕ್ಕೆ ದೇವರು, ಜಿಲ್ಲಾಡಳಿತ, ವೈದ್ಯರು ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ದೇವರ ದಯೆಯಿಂದ ಗುಣಮುಖರಾಗಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸಂತೋಷದ ಅನುಭವವಾಗುತ್ತಿದೆ. ಆಸ್ಪತ್ರೆಯಲ್ಲೂ ನಮಗೆ ಯಾವುದೇ ತೊಂದರೆಯಾಗಿಲ್ಲ. ಆರೋಗ್ಯಾಧಿಕಾರಿ, ಡಿಸಿ, ಪೊಲೀಸ್ ಅಧಿಕಾರಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬಹಳ ಉತ್ತಮವಾಗಿ ನಮಗೆ ಚಿಕಿತ್ಸೆ ನೀಡಿದ್ದಾರೆ. ಸರ್ಕಾರವೂ ನಮ್ಮನ್ನು ಉತ್ತಮವಾಗಿ ನೋಡಿಕೊಂಡಿದ್ದು, ಒಳ್ಳೆಯ ಸೌಲಭ್ಯಗಳನ್ನೂ ಒದಗಿಸಿದೆ.
ತೊಟ್ಟ ಬಟ್ಟೆಯಲ್ಲೇ ಕಾರವಾರದ ಪತಂಜಲಿ ಆಸ್ಪತ್ರೆಗೆ ತೆರಳಿದ್ದವು, ಬರುವಾಗ ಅವರ ಬಟ್ಟೆ ಹಾಕಿಕೊಂಡು ಬಂದಿದ್ದೆವು. ಅವರೇ ಚಪ್ಪಲಿಯನ್ನೂ ಕೊಟ್ಟಿದ್ದರು, ಮಹಿಳೆಯರಿಗೂ ಬಟ್ಟೆ ನೀಡಿದ್ದಾರೆ. ವೈದ್ಯಾಧಿಕಾರಿಗಳು ನಮ್ಮಲ್ಲಿ ಬಹಳಷ್ಟು ಚೆನ್ನಾಗಿದ್ದರು. ಉತ್ತಮ ಚಿಕಿತ್ಸೆ ನೀಡಿದರು. ನಮಗಾಗಿ ವೈದ್ಯಾಧಿಕಾರಿಗಳು ದೇವರಲ್ಲಿ ಪ್ರಾರ್ಥನೆ ಕೂಡಾ ಮಾಡಿದ್ದಾರೆ. ಅತ್ಯುತ್ತಮವಾಗಿ ನಮ್ಮ ಜತೆ ಬೆರೆತುಕೊಂಡು ಗುಣಮುಖಗೊಳಿಸಿದರು ಎಂದು ಡಿಸ್ಟಾರ್ಜ್ ಗೊಂಡ ಸೋಂಕಿತ ಸಂಖ್ಯೆ 98 ಹಾಗೂ ಸೋಂಕಿತ 36 ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಂದು ಕಾರವಾರದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಸೋಂಕಿತ ರೋಗಿ ಸಂಖ್ಯೆ 98, ಭಟ್ಕಳದ 26 ವರ್ಷದ ಯವಕನಾಗಿದ್ದು, ದುಬೈನಿಂದ ಮಾರ್ಚ್ 20 ರಂದು ಭಟ್ಕಳಕ್ಕೆ ಆಗಮಿಸಿದ್ದ. ದುಬೈನಿಂದ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರವಾರದ ಮೂಲಕ ಭಟ್ಕಳಕ್ಕೆ ತೆರಳಿದ್ದ ಯುವಕನಲ್ಲಿ ಸೋಂಕಿನ ಯಾವುದೇ ಗುಣಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿತ್ತು.
ಅಲ್ಲದೇ ಈ ಯುವಕನಲ್ಲಿ ಸೋಂಕು ಪತ್ತೆಯಾಗುವ ಮುನ್ನ ಮೂರು ದಿನಗಳ ಹಿಂದೆ ಆತನ ಸಹೋದರನಲ್ಲೂ ಸೋಂಕು ಪತ್ತೆಯಾಗಿತ್ತು. ಈ ಯುವಕನಲ್ಲಿ ಸೋಂಕು ದೃಢಪಟ್ಟ ಬಳಿಕ ಯುವಕನನ್ನು ಮಾರ್ಚ್ 31ರಂದು ಕಾರವಾರದ ನೌಕಾ ನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 19 ದಿನಗಳ ಬಳಿಕ ಕೊರೊನಾ ವೈರಸ್ ಕಾಟದಿಂದ ಯುವಕ ಗುಣಮುಖನಾಗಿದ್ದಾನೆ.
ಈ ಹಿಂದೆಯೇ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ಸೋಂಕಿತ ಸಂಖ್ಯೆ 36 ದುಬೈನಿಂದ ಮಾ. 19ಕ್ಕೆ ಮುಂಬೈಗೆ ತಲುಪಿದ್ದರು. ರೈಲಿನ ಮೂಲಕ ಮಾ. 20ಕ್ಕೆ ಭಟ್ಕಳಕ್ಕೆ ಬಂದಿದ್ದ 65 ವರ್ಷದ ಸೋಂಕಿತ ಸಂಖ್ಯೆ 36 ರಿಗೆ, ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾ. 21ರಂದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಪರೀಕ್ಷೆ ವರದಿಯಲ್ಲೂ ಕೊರೊನಾ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಬಳಿಕ ಈ ಹಿಂದೆಯೇ ಪತಂಜಲಿ ಆಸ್ಪತ್ರೆಯಿಂದ ಸೋಂಕಿತ ಸಂಖ್ಯೆ 36 ಬಿಡುಗಡೆಯಾಗಿದ್ದರು.