Breaking News

ವೈಜನಾಥ ಪಾಟೀಲ ಸಂಸ್ಮರಣ ಗ್ರಂಥ ಪ್ರಕಟಿಸಲು ನಿರ್ಧಾರ

Spread the love

ಕಲಬುರ್ಗಿ: ‘371 (ಜೆ) ತಿದ್ದುಪಡಿ ಹೋರಾಟದ ರೂವಾರಿ, ಮಾಜಿ ಸಚಿವ ವೈಜನಾಥ ಪಾಟೀಲ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಸಂಸ್ಮರಣ ಗ್ರಂಥ ಹೊರತರಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಂಪಾದಕೀಯ ಸಮಿತಿ ರಚನೆ ಮಾಡಲಾಗಿದೆ’ ಎಂದು ವೈಜನಾಥ ಪಾಟೀಲರ ಸಂಸ್ಮರಣಾ ಸಂಚಿಕೆ ಸಮಿತಿ ಸಂಚಾಲಕ ಎಂ.ಬಿ.ಅಂಬಲಗಿ ಮತ್ತು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೌತಮ ಪಾಟೀಲ ತಿಳಿಸಿದರು.

ನಗರದಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ವೈಜನಾಥ ಪಾಟೀಲ ಅವರು ನಿಸ್ವಾರ್ಥ ಸೇವಾಭಾವ ಹೊಂದಿದ್ದರು. ಹಿಂದುಳಿದ ಈ ಪ್ರದೇಶದ ಪ್ರಗತಿಗಾಗಿ ಮಂತ್ರಿಸ್ಥಾನವನ್ನು ತ್ಯಜಿಸಿದ ಮಹಾನ್‌ ವ್ಯಕ್ತಿ. ಅವರ ಮೊದಲ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಗ್ರಂಥವನ್ನು ಹೊರ ತರಲಾಗುತ್ತಿದ್ದು, ನವೆಂಬರ್‌ 2ರಂದು ಗ್ರಂಥವನ್ನು ಬಿಡುಗಡೆ ಮಾಡಲು ಉದ್ದೇಶಿಲಾಗಿದೆ’ ಎಂದರು.

ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಠಗಿ ಅವರು ಗೌರವ ಅಧ್ಯಕ್ಷರಾಗಿ, ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷರಾಗಿ ಹಾಗೂ ಡಾ.ರಾಜೇಂದ್ರ ಯರನಾಳೆ ಕರ್ಯನಿರ್ವಾಹಕ ಸಂಪಾದಕರಾಗಿದ್ದಾರೆ. ಪ್ರಮುಖ ಸಾಹಿತಿಗಳು, ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಪ್ರಮುಖರು ಸಮಿತಿಯಲ್ಲಿದ್ದಾರೆ. ಆಸಕ್ತರು ಮತ್ತು ವೈಜನಾಥ ಪಾಟೀಲ ಅವರ ಆಪ್ತರು ಕಳುಹಿಸಿಕೊಡುವ ಲೇಖನ ಹಾಗೂ ಬರಹಗಳನ್ನು ಸಂಪಾದನೆ ಮಾಡಿ ಗ್ರಂಥದಲ್ಲಿ ಸೇರ್ಪಡೆ ಮಾಡಲಿದ್ದಾರೆ’ ಎಂದರು.

‘ವೈಜನಾಥ ಪಾಟೀಲ ಅವರ ಜತೆಗೆ ಹೋರಾಟದಲ್ಲಿ ಭಾಗಿಯಾದವರು, ಆಪ್ತರು, ಮಾಹಿತಿ ಇರುವವರು ಒಂದು ಲೇಖನಗಳನ್ನು ‘ವೈಜನಾಥ ಪಾಟೀಲರ ಸಂಸ್ಮರಣಾ ಸಂಚಿಕೆ ಸಮಿತಿ ಎಂಐಜಿ 4, ಶಾಂತಿನಗರ, ಕಲಬುರ್ಗಿ’ ಈ ವಿಳಾಸಕ್ಕೆ ಕಳಹಿಸಿಕೊಡಬಹುದು’ ಎಂದು ಕೋರಿದರು.

‘ಇಂತಿಷ್ಟೇ ಪುಟ ಎಂದು ನಿರ್ಧರಿಸಿಲ್ಲ. ವಿಶ್ವವಿದ್ಯಾಲಯದ, ಶಾಲಾ- ಕಾಲೇಜುಗಳಲ್ಲಿ ಇರುವಂತ ಗ್ರಂಥವನ್ನು ರೂಪಿಸುವ ಉದ್ದೇಶ ಹೊಂದಲಾಗಿದೆ’ ಎಂದರು.

ಪ್ರಮುಖರಾದ ಶ್ರೀಕಾಂತಗೌಡ ತಿಳಗೂಳ, ಸಂತೋಷ ರಡ್ಡಿ, ಭವಾನಿ ಪಾಟೀಲ ಇದ್ದರು.

ಬಾಕ್ಸ್‌-1

‘ಉತ್ಸವದಲ್ಲಿ ವೈಜನಾಥ ಅವರ ಫೋಟೊ ಅಗತ್ಯ’

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‍ ಅವರ ಜತೆಗೆ ಈ ಭಾಗಕ್ಕೆ ವಿಶೇಷ ಸ್ಥಾನ ಕೊಡಿಸಲು ಹೋರಾಟ ನಡೆಸಿದ ವೈಜನಾಥ ಪಾಟೀಲ ಅವರ ಭಾವಚಿತ್ರವನ್ನೂ ಇಡಬೇಕು’ ಎಂದು ಎಂ.ಬಿ.ಅಂಬಲಗಿ ಆಗ್ರಹಿಸಿದರು.

‘ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸುಂತೆ ಒತ್ತಾಯಿಸಲು ಸಮಿತಿಯ ನಿಯೋಗವೊಂದು ಶೀಘ್ರವೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸಲಿದೆ. ವೈಜನಾಥ ಅವರ ಹೆಸರು ನೆನಪಿನಲ್ಲಿ ಉಳಿಯಬೇಕೆಂದರೆ ಸರ್ಕಾರ ಈ ನಿರ್ಧಾರವನ್ನು ಕೈಗೊಳ್ಳುವುದು ಬಹುಮುಖ್ಯ’ ಎಂದರು.

‘ಕಳೆದ ಸಲ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆಗೆ ಬಂದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದಲ್ಲಿ, ಆರೋಗ್ಯ ಸ್ಥಿತಿ ವಿಷಮವಾಗಿದ್ದರೂ ವೈಜನಾಥ ಪಾಟೀಲ ಅವರು ಗಾಲಿ ಕುರ್ಚಿ ಮೇಲೆ ಬಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಭಿನಂದಿಸಿದ್ದರು. ಈ ಭಾಗದ ಬಗ್ಗೆ ಕೊನೆಯ ಉಸಿರು ಇರುವವರೆಗೂ ಅವರು ಹೊಂದಿದ್ದ ಭಾವನಾತ್ಮಕ ಸಂಬಂಧ ಎಂಥದ್ದು ಎಂಬುದಕ್ಕೆ ಇದು ಸಾಕ್ಷಿ’ ಎಂದು ಅಂಬಲಗಿ ಸ್ಮರಿಸಿದರು.


Spread the love

About Laxminews 24x7

Check Also

ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ನಿವೃತ್ತ ಶಿಕ್ಷಕನ ಹತ್ಯೆ

Spread the loveಬೆಂಗಳೂರು, (ಡಿಸೆಂಬರ್ 03): ಸುದೀರ್ಘ ಸೇವೆಯ ಬಳಿಕ ನಿವೃತ್ತಿಯಾಗಿದ್ದ ಶಿಕ್ಷಕರೊಬ್ಬರು ಕನಸಿನ ಮನೆ ಕಟ್ಟಲು ಹಣ ಡ್ರಾ ಮಾಡಿಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ