ಬೆಂಗಳೂರು: ಸಾರ್ವಜನಿಕರ ಸುರಕ್ಷತೆಗಾಗಿ ಸದಾ ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ನಿರ್ವಹಿಸುವ ರಾಜ್ಯ ಪೊಲೀಸ್ ಸಿಬ್ಬಂದಿಗೆ ರಾಜ್ಯ ಪೊಲೀಸ್ ಇಲಾಖೆ ಕುಟುಂಬದೊಂದಿಗೆ ಸಂತಸದ ಸಮಯ ಕಳೆಯಲು ರಜೆ ಭಾಗ್ಯ ಕಲ್ಪಿಸಿದೆ.
ಹೌದು. ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ತಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ನೀಡುವಂತೆ ಆದೇಶ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂತಹ ವಿಶೇಷ ದಿನಗಳಲ್ಲಿ ರಜೆ ಪಡೆಯುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾವನಾತ್ಮಕವಾಗಿ ಪುನಶ್ಚೇತನಗೊಳ್ಳುತ್ತಾರೆ. ಜೊತೆಗೆ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು ಹಾಗೂ ಕರ್ತವ್ಯ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ. ಒತ್ತಡ ಕಡಿಮೆಯಾಗಿ, ಮನೋಬಲ ಹೆಚ್ಚಾಗುತ್ತದೆ. ಹೀಗಾಗಿ ಸಾಂದರ್ಭಿಕ ರಜೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಕಡ್ಡಾಯ ರಜೆ ನೀಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಒಳಾಡಳಿತ ಇಲಾಖೆಯು ಪೊಲೀಸ್ ಮಹಾನಿರ್ದೇಶಕರಿಗೆ (DG & IGP) ಅಧಿಕೃತ ಪತ್ರ ಬರೆದಿತ್ತು. ಇದನ್ನು ಪರಿಶೀಲಿಸಿದ ಡಿಜಿ ಡಾ ಸಲೀಂ ಅವರು, ಕಡ್ಡಾಯ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.
Laxmi News 24×7