ನವದೆಹಲಿ: ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕರ್ನಾಟಕದಲ್ಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಲೋಕಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಜಲ ಜೀವನ್ ಮಿಷನ್‌ನಲ್ಲಿ ಕರ್ನಾಟಕದಲ್ಲಿ ಈವರೆಗೂ 169 ದೂರುಗಳು ಬಂದಿವೆ. ಈ ಸಂಬಂಧ ಮನವಿ ಮಾಡಿದರೂ ಅಕ್ರಮ ದೂರುಗಳ ಮೇಲೆ ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ನನ್ನ ಕ್ಷೇತ್ರ ಚಿತ್ರದುರ್ಗದಲ್ಲೂ ಅಕ್ರಮ ನಡೆದಿವೆ. ಚಿತ್ರದುರ್ಗ ಸಂಸದೀಯ ಕ್ಷೇತ್ರದಲ್ಲಿ 3,81,012 ಮನೆಗಳ ಪೈಕಿ 3,36,040 ಮನೆಗಳಿಗೆ ಕೊಳವೆ ನೀರಿನ ಸಂಪರ್ಕವಾಗಿದೆ ಎಂದು ಮಾಹಿತಿ ಇದೆ. ನಾನು ಖುದ್ದು ಪರಿಶೀಲನೆ ಮಾಡಿದಾಗ ಹಲವಾರು ಗ್ರಾಮೀಣ ಪ್ರದೇಶದಲ್ಲಿ 88.6% ಅಸಮರ್ಪಕ ಸಂಪರ್ಕ ಕಲ್ಪಿಸಲಾಗಿದೆ. ಈ ಬಗ್ಗೆ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಜಲಶಕ್ತಿ ಸಚಿವ ಸಿಆರ್ ಪಾಟೀಲ್, ನಾವು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿದ್ದೇವೆ, ಈವರೆಗೂ ರಾಜ್ಯ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಜಲ ಜೀವನ ಮಿಷನ್ ಕೇಂದ್ರ ಸರ್ಕಾರದ ಯೋಜನೆಯಾದರು ರಾಜ್ಯ ಸರ್ಕಾರವೇ ಡಿಪಿಆರ್ ತಯಾರಿಸಿ, ಟೆಂಡರ್ ಮಾಡುತ್ತದೆ. ಇಂತಹ ಅಕ್ರಮಗಳ ಬಗ್ಗೆ ತನಿಖೆಯಾಗಬೇಕು ಎಂದು ಪ್ರಧಾನಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಈವರೆಗೂ ದೇಶಾದ್ಯಂತ 4,000 ಪ್ರಕರಣಗಳಲ್ಲಿ ತನಿಖೆ ನಡೆದಿದೆ. ಚಿತ್ರದುರ್ಗದಲ್ಲೂ ಅಕ್ರಮ ಕಂಡು ಬಂದರೆ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.
Laxmi News 24×7