ಗೋಕಾಕ: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಡರುಡುತ್ತಿದ್ದು ಜನರ ಬದುಕು ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಹಗಲಿರುಳು ಕೆಲಸ ಮಾಡಬೇಕಾದ ಪುರಸಭೆ ಸಿಬ್ಬಂದಿಯೊಬ್ಬ ಸರ್ಕಾರಿ ಕಚೇರಿಯಲ್ಲಿಯೇ ಅದ್ದೂರಿಯಾಗಿ ಜನುಮದಿನ ಆಚರಿಸಿಕೊಂಡ ಆರೋಪ ಕೇಳಿ ಬಂದಿದೆ.
ಗೋಕಾಕ ತಾಲೂಕಿನ ಕೊಣ್ಣೂರು ಪುರಸಭೆ ಕಚೇರಿಯಲ್ಲಿಯೇ ನಿನ್ನೆ ಎಫ್ ಡಿಸಿ ರಮೇಶ ಭಾಮನೆ ಎಂಬಾತ ಅದ್ದೂರಿಯಾಗಿ ತನ್ನ ಜನುಮದಿನ ಆಚರಿಸಿಕೊಂಡಿದ್ದಾನೆ. ಕಚೇರಿಯಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿಕೊಂಡಿದ್ದಾನೆ. ಕನಿಷ್ಟ ಮಾಸ್ಕ ಕೂಡ ಧರಿಸಿರದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹಲವು ಗೆಳೆಯರು ಭಾಗಿಯಾಗಿದ್ರು. ಜನರಿಗೆ ತಿಳುವಳಿಕೆ ಹೇಳಬೇಕಾದ ಅಧಿಕಾರಿಗಳೇ ಈ ರೀತಿ ನಿರ್ಲಕ್ಷ್ಯ ತೋರಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ ಸರ್ಕಾರಿ ಅಧಿಕಾರಿಯೇ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಅಧಿಕಾರಿಯ ಜನುಮದಿನದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ತಕ್ಷಣ ಕಠಿಣ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.