ನವದೆಹಲಿ: ಕರ್ನಾಟಕದ ಹುಬ್ಬಳ್ಳಿಗೆ ತೆರಳಬೇಕಾಗಿದ್ದ ಮಹಿಳೆ ರಾಷ್ಟ್ರ ರಾಜಧಾನಿ ನವದೆಹಲಿ ವಿಮಾನ ನಿಲ್ದಾಣದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮಂಗಳವಾರ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಈ ಘಟನೆ ನಡೆದಿದೆ. ಈ ಮೂಲಕ ನವದೆಹಲಿ ವಿಮಾನ ನಿಲ್ದಾಣಕ್ಕೆ ಅತ್ಯಂತ ಯುವ ಪ್ರಯಾಣಿಕರೊಬ್ಬರು ಆಗಮಿಸಿದಂತೆ ಆಗಿದೆ.
ವಿಮಾನಕ್ಕಾಗಿ ಮಹಿಳೆ ಪತಿಯ ಜತೆಗೆ ಕಾಯುತ್ತಿದ್ದರು. ತುಂಬು ಗರ್ಭಿಣಿಯಾಗಿದ್ದ ಅವರು ಶೌಚಾಲಯಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿಯೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಕೂಡಲೇ ಸಮೀಪದಲ್ಲಿಯೇ ಇದ್ದ ಹೆರಿಗೆ ವಾರ್ಡ್‌ಗೆ ಅವರನ್ನು ಕರೆದೊಯ್ಯಲಾಯಿತು. ಅಲ್ಲಿ ಅವರು ಗಂಡು ಮಗುವಿಗೆ ಜನ್ಮನೀಡಿದರು. ತಾಯಿ ಮತ್ತು ಆರೋಗ್ಯದಿಂದ ಇದ್ದಾರೆ ಎಂದು ಡಾ.ಪ್ರವೀಣ್ ಸಿಂಗ್ ತಿಳಿಸಿದ್ದಾರೆ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ ನಿಯಮಿತ ಕೂಡ ಮಗುವಿನ ಜನನ ಬಗ್ಗೆ ಹರ್ಷ ವ್ಯಕ್ತಪಡಿಸಿದೆ. ನಂತರ ತಾಯಿ ಮತ್ತು ಮಗುವನ್ನು ಸಮೀಪದಲ್ಲಿಯೇ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.