ರಾಯಚೂರು/ಯಾದಗಿರಿ: ಮಗಳ ಮದುವೆಗೆಂದು ಬಂದಿದ್ದ ತಂದೆ ಕೊರೊನಾಗೆ ವೈರಸ್ ಗೆ ಬಲಿಯಾಗಿರುವ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ವನಕೇರಿ ಮೂಲದ ವ್ಯಕ್ತಿ(45) ರಾಯಚೂರಿನ ಸಿರವಾರ ಪಟ್ಟಣದ ವಿದ್ಯಾನಗರದಲ್ಲಿ ನಡೆದಿದ್ದ ಮದುವೆಗೆ ಆಗಮಿಸಿದ್ದರು. ಮಗಳ ಮದುವೆ ಮುಗಿಸಿದ್ದ ವ್ಯಕ್ತಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿತ್ತು.
ಕೂಡಲೇ ಅವರನ್ನು ಸಿರವಾರ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ರಾಯಚೂರು ರಿಮ್ಸ್ ಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಹಾಗೆಯೇ ರಿಮ್ಸ್ ಗೆ ಕರೆದುಕೊಂಡು ಹೋಗುತ್ತಿರುವಾಗಲೇ ವ್ಯಕ್ತಿ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯ ಕೋವಿಡ್ ಟೆಸ್ಟ್ ನಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಮೃತರ ಪತ್ನಿ ಆಶಾ ಕಾರ್ಯಕರ್ತೆಯಾಗಿದ್ದಾರೆ. ಸಿರವಾರ ಪಟ್ಟಣದ 70 ಮನೆಗಳು ಬಫರ್ ಝೋನ್, 3 ಮನೆ ಕಂಟೈನ್ಮೆಂಟ್, 3 ಖಾಸಗಿ ಆಸ್ಪತ್ರೆ ಸೀಲ್ ಡೌನ್ ಮಾಡಲಾಗಿದೆ. ಯಾದಗಿರಿ ಜಿಲ್ಲೆಗೆ ಮೃತದೇಹ ರವಾನಿಸಿ, ಕೋವಿಡ್ ನಿಯಮಾನುಸಾರ ಮೃತ ಸೋಂಕಿತ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.