ಮೂಡಲಗಿ : ಗ್ರಾಮಸ್ಥರ ಒಗ್ಗಟ್ಟಿನ ಹೋರಾಟದಿಂದ ಮಂಜೂರಾಗಿ ರದ್ದಾಗಿದ್ದ ಸರ್ಕಾರಿ ಪ್ರೌಢ ಶಾಲೆಯನ್ನು ಮರಳಿ ಮಂಜೂರಾತಿ ಪಡೆದು ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟ ತಿಗಡಿ ಗ್ರಾಮಸ್ಥರನ್ನು ಅರಭಾವಿ ಶಾಸಕರೂ ಆಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದರು.
ತಾಲೂಕಿನ ತಿಗಡಿ ಗ್ರಾಮದಲ್ಲಿ ಶನಿವಾರದಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 1.27 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರೌಢ ಶಾಲೆಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನೆರೆಯ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢ ಶಾಲೆಗಳಿದ್ದರೂ ಗ್ರಾಮಸ್ಥರ ಸಂಘಟಿತ ಹೋರಾಟದಿಂದ ತಿಗಡಿ ಗ್ರಾಮದಲ್ಲಿಯೂ ಹೊಸ ಸರ್ಕಾರಿ ಪ್ರೌಢ ಶಾಲೆ ಮರಳಿ ಪಡೆದಿರುವುದಕ್ಕೆ ಗ್ರಾಮಸ್ಥರ ಕಾರ್ಯಕ್ಕೆ ಶಾಸಕರು ಶ್ಲಾಘನೆ ವ್ಯಕ್ತಪಡಿಸಿದರು.
ತಿಗಡಿಗೆ ಹೊಸ ಸರ್ಕಾರಿ ಪ್ರೌಢ ಶಾಲೆ ದೊರೆಯಲು ದೊಡ್ಡ ಮಟ್ಟದ ಹೋರಾಟ ನಡೆದಿದೆ. ನೆರೆಯ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢ ಶಾಲೆಗಳು ಕೇವಲ 5 ಕಿ.ಮೀ ಅಂತರದೊಳಗೆ ಇರುವುದರಿಂದ ತಿಗಡಿಗೆ ಪ್ರೌಢ ಶಾಲೆ ಮಂಜೂರಾಗಿ ಕೊನೆಗೆ ರದ್ದಾಗಿತ್ತು. ಆದರೆ ಆಗಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಡಾ. ಪಿ.ಸಿ. ಜಾಫರ್ ಅವರ ಸಹಕಾರದಿಂದ ತಿಗಡಿಗೆ ಕೊನೆಗೂ ಪ್ರೌಢ ಶಾಲೆ ಮಂಜೂರಾಯಿತು. ಅದಕ್ಕಾಗಿ ಜಾಫರ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ ಅವರ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ತಿಗಡಿ ಗ್ರಾಮದ ಖಂಡ್ರಟ್ಟಿ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಪ್ರೌಢ ಶಾಲೆಯ ನೂತನ ಕಟ್ಟಡಕ್ಕೆ 4 ಎಕರೆ ನಿವೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ಅರಭಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ಕೊಟ್ಟಿರುವಷ್ಟು ಪ್ರಾಶಸ್ತ್ಯ ಯಾವುದಕ್ಕೂ ಕೊಟ್ಟಿರುವುದಿಲ್ಲ. ಶಿಕ್ಷಣವೊಂದೇ ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಮುಖ್ಯ ಅಸ್ತ್ರವಾಗಿದ್ದು, ಶಿಕ್ಷಣದಿಂದ ಮಾತ್ರ ಏನೆಲ್ಲ ಪಡೆಯಲು ಸಾಧ್ಯವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನೆಡೆಯಾಗಿದ್ದರೂ ಈ ಹಿಂದೆ ಬಾಕಿ ಉಳಿದಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಕ್ಷೇತ್ರಕ್ಕೆ ವಿವಿಧ ಯೋಜನೆಗಳಿಗಾಗಿ ಅನುದಾನ ನೀಡುತ್ತಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೂಡಲಗಿ ಬಿಇಓ ಅಜೀತ ಮನ್ನಿಕೇರಿ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಸಾರ್ವಜನಿಕರಿಗೆ ಸಾಕಷ್ಟು ನೆರವು ನೀಡಿದ್ದಾರೆ. ಜೊತೆಗೆ ಶಿಕ್ಷಣಕ್ಕಾಗಿಯೂ ಅವರ ಕೊಡುಗೆ ಅನನ್ಯವಾಗಿದೆ. ಬಾಲಚಂದ್ರ ಜಾರಕಿಹೊಳಿ ಅವರಿಂದ ಶಿಕ್ಷಣ ರಂಗದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಇವರ ಪ್ರಯತ್ನದಿಂದಾಗಿ ಈಗಾಗಲೇ 34 ಸರ್ಕಾರಿ ಪ್ರೌಢ ಶಾಲೆಗಳು ಕಾರ್ಯಾರಂಭವಾಗಿ ಈಗಾಗಲೇ ಅವುಗಳಿಗೆ ಹೊಸ ಕಟ್ಟಡಗಳಿಗಾಗಿ ಅನುದಾನವನ್ನೂ ಸಹ ನೀಡಿದ್ದಾರೆ ಎಂದು ಹೇಳಿದರು.
ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು, ಸ್ಥಳೀಯ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮಿಗಳು, ತಹಶೀಲ್ದಾರ ಡಿ.ಜೆ. ಮಹಾತ, ಡಾ. ಆರ್.ಎಸ್. ಬೆಣಚಿನಮರಡಿ, ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ರವಿ ಪರುಶೆಟ್ಟಿ, ರಮೇಶ ಗಡಗಿ, ಮುಖಂಡರಾದ ವಾಯ್.ಆರ್. ಪಾಟೀಲ, ಹನಮಂತ ಅಂಬಿ, ನಾಗಪ್ಪ ಪಾಟೀಲ, ಹನಮಂತ ಪೂಜೇರಿ, ಸಿದ್ರಾಯಿ ಬಿರಡಿ, ಅಶೋಕ ಪೂಜೇರಿ, ಯಲ್ಲಪ್ಪ ಹರಿಜನ, ರಫೀಕ ಲಾಡಖಾನ, ಶಂಕರ ಕೆಂಚನವರ, ಯಲ್ಲಪ್ಪ ಹೂಲಿಕಟ್ಟಿ, ನಾರಾಯಣ ವಾಲಿಕಾರ, ರುದ್ರಗೌಡ ಪಾಟೀಲ, ಎಚ್.ಆರ್. ಪಾಟೀಲ, ಪಂಚಾಯತ್ ರಾಜ್ ಇಲಾಖೆಯ ಜೆಇ ಮಲ್ಲಮ್ಮಾ, ಪಿಡಿಓ ಪತ್ತಾರ, ಗುತ್ತಿಗೆದಾರ ಲಕ್ಷ್ಮಣ ಗಡಾದ, ಗ್ರಾಮ ಪಂಚಾಯತ ಸದಸ್ಯರು, ನೆರೆಯ ಗ್ರಾಮಗಳ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.