ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮ ಹೆಸರಿಡುವ ಕುರಿತಂತೆ ಸಿದ್ಧರಾಮಯ್ಯ ಸಕಾ೯ರ ಕಳಿಸಿದ್ದ ಶಿಫಾರಸ್ಸನ್ನು ಡಿಸೆಂಬರ್ 2018 ರಲ್ಲಿ ರದ್ದು ಮಾಡಿರುವ ಕೇಂದ್ರ ಸಕಾ೯ರ, ಇತ್ತೀಚಿಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದು ವಿಮಾನ ನಿಲ್ದಾಣಕ್ಕೆ ಹೆಸರಿಡಲು ಐತಿಹಾಸಿಕ ವ್ಯಕ್ತಿಗಳ ಹೆಸರಿಗಳನ್ನು ಕಳಿಸಿಕೊಡಲು ಸೂಚಿಸಿದೆ
‘ ರೇಲ್ವೆಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ, ಮಂಗಳವಾರ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಚನ್ನಮ್ಮನ ಹೆಸರನ್ನು ಶಿಫಾರಸು ಮಾಡುವಂತೆ ಜಿಲ್ಲಾಡಳಿತವನ್ನು ಕೋರಿದ್ದಾರೆ. ಆದರೆ, ಈಗಾಗಲೇ ಕೇಂದ್ರದಿಂದ ತಿರಸ್ಕೃತಗೊಂಡಿರುವ ಹೆಸರನ್ನು ಜಿಲ್ಲಾಡಳಿತ ಮತ್ತೆ ಕಳಿಸುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.
ವಿಶೇಷವೆಂದರೆ, ಸುರೇಶ ಅಂಗಡಿ ಅವರು ತಮ್ಮ ಪತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಸಪ್ಟೆಂಬರ್ 14,2017 ರಂದು ನಡೆದ ವಿಸ್ತರಣೆಗೊಂಡ ವಿಮಾನ ನಿಲ್ದಾಣದ ರನ್ ವೇ ಮತ್ತು ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದ ಸಂದಭ೯ದಲ್ಲಿ ಸಿದ್ಧರಾಮಯ್ಯ ಅವರು ನಿಲ್ದಾಣಕ್ಕೆ ಚನ್ನಮ್ಮ ಹೆಸರು ಇರುವಂತೆ ಆಗಿನ ವಿಮಾನಯಾನ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದನ್ನು ನೆನಪಿಸಿದ್ದಾರೆ.
ಆದರೆ, ಮುಂದುವರಿದು, ಸಿದ್ಧರಾಮಯ್ಯ ಅವರ ಮನವಿಗೆ ಕೇಂದ್ರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳುವುದರ ಮೂಲಕ ಸತ್ಯವನ್ನು ಮರೆಮಾಚಲು ಯತ್ನಿಸಿದ್ದಾರೆ. ಏಕೆಂದರೆ, ಕೇಂದ್ರ ಸಕಾ೯ರ ವಷ೯ದ ಹಿಂದೆಯೇ ಸಿದ್ಧರಾಮಯ್ಯ ಮಾಡಿದ ಶಿಫಾರಸ್ಸನ್ನು ತಿರಸ್ಕರಿಸಿದೆ. ಮಾಜಿ ಮಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿ ಅಧಿವೇಶನ ಸಂದಭ೯ದಲ್ಲಿ ಸದನಸಲ್ಲಿಯೇ ಇದನ್ನು ತಿಳಿಸಿದ್ದರು.
ವಿಚಿತ್ರ ಎಂದರೆ, ಮಾತೆತ್ತಿದಾಗಲೊಮ್ಮೆ ನಾವು ಚನ್ನಮ್ಮನ ನಾಡಿನವರು ಎನ್ನುವ ನಾಯಕರು, ಕೇಂದ್ರ ಸಕಾ೯ರ ಚನ್ನಮ್ಮನ ಹೆಸರನ್ನು ತಿರಸ್ಕರಿಸಿದಾಗ ಒಬ್ಬರು ಕೂಡ ಮಾತನಾಡಲಿಲ್ಲ. ಬೆಳ್ಳಿಚುಕ್ಕಿ ವೀರರಾಣಿ ಚನ್ನಮ್ಮನ ಹೆಸರನ್ನು ಯಾವ ಆಧಾರದ ಮೇಲೆ ತಿರಸ್ಕರಿಸಿದ್ದೀರಿ ಎಂದು ಕೇಂದ್ರವನ್ನು ಕೇಳುವ ಧ್ಯೆಯ೯ ಮಾಡಲಿಲ್ಲ. ಬೆಳಗಾವಿಯನ್ನು ಕೇಂದ್ರದಲ್ಲಿ ಪ್ರತಿನಿಧಿಸುತ್ತಿರುವ ಸುರೇಶ ಅಂಗಡಿ ಈ ಕೆಲಸವನ್ನು ಮಾಡಬೇಕಿತ್ತು. ಆದರೆ, ಕಾಟಾಚಾರಕ್ಕೆ ಎಂಬಂತೆ, ಜಿಲ್ಲಾಡಳಿತಕ್ಕೆ ಮತ್ತೊಂದು ಪತ್ರ ಬರೆದು ಸುಮ್ಮನಾಗುವುದು ಶೋಭೆ ತರುವ ವಿಚಾರ ಅಲ್ಲ.