ಬೆಂಗಳೂರು: ಬೆಳಗಾವಿ ಗಡಿ ವಿವಾದ ಸಂಬಂಧ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿವರಣೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಡಿ. 14 ಮತ್ತು 15ರಂದು ಎರಡೂ ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸೋಮವಾರ ರಾಜ್ಯದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲಿದೆ. ಅಮಿತ್ ಶಾ ಕೂಡ ತಾವು ಹೇಳಿದಾಗ ಬರಬೇಕಾಗುತ್ತದೆ ಎಂದು ನನಗೆ ತಿಳಿಸಿದ್ದಾರೆ. ಕರ್ನಾಟಕದ ವಿಚಾರ, ನಿಲುವು, ವಾಸ್ತವಾಂಶವನ್ನು ಈಗಾಗಲೇ ಕೇಂದ್ರ ಸಚಿವರಿಗೆ ತಿಳಿಸಿದ್ದೇನೆ. ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ನಿಲುವನ್ನು ಮತ್ತೂಮ್ಮೆ ಅವರಿಗೆ ಸ್ಪಷ್ಟಪಡಿಸಲಾಗುವುದು ಎಂದರು.
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ. ಸಭೆ ನಿಗದಿಯಾದ ಕೂಡಲೇ ತಿಳಿಸಲಿದ್ದೇನೆ ಎಂದಿದ್ದಾರೆ.