Breaking News

ಹುಕ್ಕೇರಿ ಬಳಿ ಅಪರಿಚಿತ ವಾಹನ ಡಿಕ್ಕಿ: ಇಬ್ಬರು ಯುವಕರ ಸಾವು

Spread the love

ಬೆಳಗಾವಿ ಜಿಲ್ಲೆ): ಹುಕ್ಕೇರಿ ಸಮೀಪದ ಹೊಳೆಮ್ಮನ ಗುಡಿ ಹಳ್ಳದ ಹತ್ತಿರ ಸೋಮವಾರ ಸಂಜೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಬೈಕ್‌ ಮೇಲೆ ಹೊರಟಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ಮಲ್ಲನಗೌಡ ಯಲ್ಲನಗೌಡ ಪಾಟೀಲ (22) ಹಾಗೂ ಸಿದ್ಧಾರೂಢ ವೀರಭದ್ರ ಕರೋಶಿ (24) ಮೃತಪಟ್ಟವರು.

ಭಾರಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವ ಆಗಿದ್ದರಿಂದ ಅವರು ಬದುಕುಳಿಯಲಿಲ್ಲ.

ಇಬ್ಬರೂ ಸ್ನೇಹಿತರು ಕೂಡಿಕೊಂಡು ಬೈಕ್‌ ಮೇಲೆ ಸೋಮವಾರ ಬೆಳಿಗ್ಗೆ ಹುಕ್ಕೇರಿ ತಾಲ್ಲೂಕಿನ ಕರೋಶಿಯ ದೇವಸ್ಥಾನಕ್ಕೆ ಹೋಗಿದ್ದರು. ಮಹಾನವಮಿ ಅಂಗವಾಗಿ ಕರೋಶಿಯ ತಮ್ಮ ಮನೆದೇವರಿಗೆ ದೀಪ ಹಚ್ಚಲು ಹೋಗಿದ್ದರು. ಅಲ್ಲಿಂದ ಮರಳಿ ಬರುವಾಗ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಮೂರು ತಾಸು ಯಾರಿಗೂ ಗೊತ್ತಾಗಲಿಲ್ಲ

ಹುಕ್ಕೇರಿ ಪಟ್ಟಣ ಹೊರವಲಯದಲ್ಲಿರುವ ಹೊಳೆಮ್ಮನ ಗುಡಿಯ ಹಳ್ಳದ ದಾರಿಯಲ್ಲಿ ಯಾವುದೋ ವಾಹನ ಯುವಕರ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಯುವಕರು ಬೈಕ್‌ ಸಮೇತ ರಸ್ತೆ ಪಕ್ಕದ ಆಳಕ್ಕೆ ಬಿದ್ದರು. ಈ ಮಾರ್ಗದಲ್ಲಿ ವಾಹನ ಹಾಗೂ ಜನಸಂಚಾರ ವಿರಳ. ರಸ್ತೆ ಪಕ್ಕದ ಆಳದಲ್ಲಿ ಬಿದ್ದಿದ್ದರಿಂದ ಸುಮಾರು ಮೂರು ತಾಸು ಇವರನ್ನು ಯಾರೂ ಗಮನಿಸಿಲ್ಲ.

ಇಬ್ಬರೂ ಯುವಕರು ತಮ್ಮ ಸ್ನೇಹಿತನ ಬೈಕ್‌ ತೆಗೆದುಕೊಂಡು ಹೋಗಿದ್ದರು. ಸಂಜೆ 7ರ ನಂತರವೂ ಸ್ನೇಹಿತರು ಮರಳದ ಕಾರಣ ಬೈಕ್‌ ಕೊಟ್ಟ ಯುವಕ ಪದೇಪದೇ ಫೋನ್‌ ಮಾಡುತ್ತಿದ್ದರು. ಇದೇ ವೇಳೆ ಅಪಘಾತವಾದ ರಸ್ತೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಹೊರಟಿದ್ದರು. ಬೈಕ್‌ ಬಿದ್ದಿದ್ದನ್ನು ಕಂಡು ಸ್ಥಳಕ್ಕೆ ಹೋದಾಗಲೇ ವಿಷಯ ಗೊತ್ತಾಗಿದೆ. ಅವರು ಅಗ್ನಿಶಾಮಕ ಠಾಣೆಯಲ್ಲಿ ಕೆಲಸ ಮಾಡುವ ಚಚಡಿ ಊರಿನ ಇನ್ನೊಬ್ಬ ಯುವಕನಿಗೆ ಫೋನ್‌ ಮಾಡಿ ಸುದ್ದಿ ಮುಟ್ಟಿಸಿದರು.

ಆಂಬುಲೆನ್ಸ್ ಕರೆಸಿ ಯುವಕರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟರೊಳಗೆ ಒಬ್ಬರು ಕೊನೆಯುಸಿರೆಳೆದಿದ್ದು, ಕೆಲವು ಗಂಟೆಗಳಲ್ಲಿ ಮತ್ತೊಬ್ಬ ಯುವಕ ಕೂಡ ಇಲ್ಲವಾದರು.

ಆಸ್ಪತ್ರೆ ಮುಂದೆ ಸೇರಿದ ಹೆತ್ತವರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಮರಣೋತ್ತರ ಪರೀಕ್ಷೆ ನಡೆಸಿ, ಮಂಗಳವಾರ ಬೆಳಿಗ್ಗೆ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್‌ ಆಗುವ ಖುಷಿಯಲ್ಲಿದ್ದ

ಸಿದ್ಧಾರೂಢ ಗ್ರಾಮದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ಮಲ್ಲನಗೌಡ ಈಚೆಗೆ ನಡೆದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿಯಲ್ಲಿ ಆಯ್ಕೆಗೊಂಡಿದ್ದರು. ಕೆಲವೇ ದಿನಗಳಲ್ಲಿ ಪೊಲೀಸ್‌ ಸೇವೆಗೆ ಸೇರಲು ತುದಿಗಾಲಲ್ಲಿ ನಿಂತಿದ್ದರು. ನೇಮಕಾತಿ ಆದೇಶ ಬರುವುದು ಮಾತ್ರ ಬಾಕಿ ಇತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ