ಮೈಸೂರು: ಬೆಳಗ್ಗೆಯಷ್ಟೇ ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿರುವುದರಿಂದ ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮೈಸೂರು ನಗರದ ಜನರಿಗೆ ಇದೀಗ ಮತ್ತೆ ಆತಂಕ ಎದುರಾಗಿದ್ದು, ಮೇ 17ರ ವರೆಗೆ ಲಾಕ್‍ಡೌನ್ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಮೇ 4ರಿಂದ 17 ರವರೆಗೆ ಲಾಕ್ ಡೌನ್ ಮುಂದುವರಿಯಲಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 12 ರಿಂದ ಸಂಜೆ 7ರ ವರೆಗೆ ಅಗತ್ಯ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಇದನ್ನು ಹೊರತುಪಡಿಸಿ ಅನಗತ್ಯ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಯಾವುದೇ ವ್ಯಾಪಾರಕ್ಕೆ ಅವಕಾಶ ಇಲ್ಲ. ಈ ಹಿಂದಿನ ಆದೇಶದಂತೆ ಲಾಕ್ ಡೌನ್ ಮುಂದುವರಿಯಲಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ಮದ್ಯ ಮಾರಾಟದ ಬಗ್ಗೆ ಗೊಂದಲ
ಮೈಸೂರು ರೆಡ್‍ಝೋನ್ ಆಗಿರುವ ಹಿನ್ನೆಲೆ ಮದ್ಯ ಮಾರಾಟಕ್ಕೆ ಸಮಯಾವಕಾಶ ನಿಗದಿ ಮಾಡುವ ಸಾಧ್ಯತೆ ಇದೆ. ಮಧ್ಯಾಹ್ನ 12 ಗಂಟೆ ಒಳಗಾಗಿ ಮದ್ಯ ಖರೀದಿಗೆ ಅವಕಾಶ ನೀಡಲಾಗಿದ್ದು, ಮೈಸೂರು ನಗರ ಪೊಲೀಸ್ ಆಯುಕ್ತರ ಹೊಸ ಆದೇಶದಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಸರ್ಕಾರ ವಿನಾಯಿತಿ ನೀಡಿದ ಸೇವೆಗಳನ್ನು 12 ಗಂಟೆ ಒಳಗೆ ಪಡೆದುಕೊಳ್ಳಲು ಸೂಚನೆ ನೀಡಿದ್ದಾರೆ. ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಯೇ ಅಂತಿಮ ತಿರ್ಮಾನ ಮಾಡಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ನಾಳೆ ಪೊಲೀಸ್ ಆಯುಕ್ತರ ಜೊತೆ ಸಭೆ ನಡೆಸಿ ಅಬಕಾರಿ ಆಯುಕ್ತರು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.