ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ..: ಸಿಎಂ ಬೊಮ್ಮಾಯಿಗೆ ಸವಾಲೆಸೆದ ಕುಮಾರಸ್ವಾಮಿ
ಬೆಂಗಳೂರು: ಭೂಗಳ್ಳರಿಗೆ ನನ್ನಿಂದ ಸಹಾಯವಾಗಿದೆ ಎಂದು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೇರ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಯಾರು ಯಾರು ಕೆರೆ, ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಿ ಎಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಗ್ಗೆ ಸಿಎಂ ಏನು ಬೇಕಾದರೂ ಮಾತನಾಡಲಿ, ನನ್ನ ಬಗ್ಗೆ ಮಾತನಾಡುವಾಗ ನೋಡಿಕೊಂಡು ಮಾತನಾಡಲಿ. ಎಚ್ಚರಿಕೆಯಿಂದ ಮಾತನಾಡಿದರೆ ಉತ್ತಮ ಎಂದು ಅವರು ಗರಂ ಆದರು.
ಪೆರಿಫೆರಲ್ ರಿಂಗ್ ರೋಡ್ ಗೆ ಆರು ಸಾವಿರ ಕೋಟಿ ರೂ. ಯೋಜನೆ ರೂಪಿಸಿದ್ದೆ. ಇಂದು 22 ಸಾವಿರ ಕೋಟಿ ರೂ. ಆಗಿದೆ. ಇದು ಕಾಂಗ್ರೆಸ್, ಬಿಜೆಪಿಯ ಸಾಧನೆ. ಅಂದಾಜು ವೆಚ್ಚ ಹೆಚ್ಚಿಸುತ್ತಾ ಹೋಗುವುದೇ ಇವರ ಸಾಧನೆ ಎಂದು ಅವರು ವಾಗ್ದಾಳಿ ನಡೆಸಿದರು.