Breaking News

ವಾಯವ್ಯ ಶಿಕ್ಷಕರ ಕ್ಷೇತ್ರ:‌ ಕಾಂಗ್ರೆಸ್‌ಗೆ ಬಂಡಾಯ, ಬಿಜೆಪಿಗೆ ಒಳ ಏಟಿನ ಭೀತಿ

Spread the love

ಬಾಗಲಕೋಟೆ: ಪಕ್ಷ ಸಂಘಟನೆ, ಹೆಚ್ಚಿನ ಸಂಖ್ಯೆಯಲ್ಲಿರುವ ಶಾಸಕರ ಬಲ (33ರಲ್ಲಿ 22) ನೆಚ್ಚಿಕೊಂಡು ಬಿಜೆಪಿಯು ಮೂರನೇ ಬಾರಿಗೆ ಅರುಣ ಶಹಾಪುರ ಅವರನ್ನು ಕಣಕ್ಕಿಳಿಸಿದೆ. ಆದರೆ, ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಅವರಿಗೆ ಮಗ್ಗಲು ಮುಳ್ಳಾಗಿದೆ.

ಬಿಜೆಪಿಯಲ್ಲಿನ ಮುಸುಕಿನ ಗುದ್ದಾಟದ ಲಾಭ ಪಡೆಯಲು ಕಾಂಗ್ರೆಸ್‌ ಅನುಭವಿ ರಾಜಕಾರಣಿ ಪ್ರಕಾಶ ಹುಕ್ಕೇರಿ ಅವರನ್ನು ಕಣಕ್ಕಿಳಿಸಿದೆ. ಆದರೆ, ಬಂಡಾಯ ಅವರ ಓಟಕ್ಕೆ ಬ್ರೇಕ್‌ ಹಾಕುತ್ತಿದೆ.

12 ವರ್ಷಗಳ ಕಾಲ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಮುಂದಿಟ್ಟುಕೊಂಡು ಶಹಾಪುರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಬಿಜೆಪಿ ಮುಖಂಡ, ಕೆ.ಎಲ್‌.ಇ. ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ
ಅವರಿಗೆ ರಾಜ್ಯಸಭೆಗೆ, ಅವರ ಪುತ್ರಿ ಪ್ರೀತಿ ಕೋರೆ ಅವರಿಗೆ ಶಿಕ್ಷಕರ ಕ್ಷೇತ್ರದಿಂದ ಟಿಕೆಟ್‌ ನಿರಾಕರಿಸಿದ್ದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಲಿದೆಯೇ ಎಂಬ ಮಾತು ಬಿಜೆಪಿ ಅಂಗಳದಲ್ಲೇ ಕೇಳಿ ಬರುತ್ತಿದೆ.

ಶಹಾಪುರ ಎರಡನೇ ಅವಧಿಯಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಶಿಕ್ಷಕರ ಮುಖಂಡರನ್ನು ದೂರವಿಟ್ಟಿದ್ದರು. ಪಕ್ಷದ ಉಳಿದ ನಾಯಕರ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವುದಿಲ್ಲ ಎಂಬ ದೂರುಗಳು ಅವರಿಗೆ ಮೈನಸ್‌ ಆಗಿವೆ.

ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎನ್‌.ಬಿ. ಬನ್ನೂರ ಅವರನ್ನು ಬಿಟ್ಟು, ಚುನಾವಣಾ ರಾಜಕೀಯ ಪಟ್ಟುಗಳನ್ನು ಬಲ್ಲ ಪ್ರಕಾಶ ಹುಕ್ಕೇರಿ ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಆದ ಮೇಲೆ ಎಂ.ಬಿ. ಪಾಟೀಲ ಅವರಿಗೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೊದಲ ಚುನಾವಣೆಯಾಗಿದೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರವೂ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇಬ್ಬರೂ ನಾಯಕರು ಹುಕ್ಕೇರಿ ಅವರನ್ನು ಗೆಲ್ಲಿಸಲು ಎಲ್ಲ ದಾಳಗಳನ್ನು ಉರುಳಿಸುತ್ತಿದ್ದಾರೆ.

ಹುಕ್ಕೇರಿ ಅವರಿಗೆ ಕ್ಷೇತ್ರ ಹೊಸತು ಹಾಗೂ ವ್ಯಾಪ್ತಿ ದೊಡ್ಡದಾಗಿರುವುದರಿಂದ ವಯಸ್ಸಿನ ಕಾರಣದಿಂದಾಗಿ ಎಲ್ಲೆಡೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಪುತ್ರ, ಶಾಸಕ ಗಣೇಶ ಹುಕ್ಕೇರಿ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಹುಕ್ಕೇರಿ ಅವರಿಗೆ ವಯಸ್ಸಾಗಿದೆ ಎಂಬುದನ್ನೇ ಉಳಿದ ಅಭ್ಯರ್ಥಿಗಳು ಅಸ್ತ್ರವಾಗಿಸಿಕೊಂಡಿದ್ದಾರೆ. ಪಕ್ಷದಲ್ಲಿಯೂ ಅಲ್ಲಲ್ಲಿ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ.

ಎನ್‌.ಬಿ. ಬನ್ನೂರ ಅವರು, ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಮೂರನೇ ಬಾರಿಗೆ ಕಣಕ್ಕಿಳಿದಿರುವುದು ಕಾಂಗ್ರೆಸ್‌ ಓಟಕ್ಕೆ ಕಡಿವಾಣ ಹಾಕಿದೆ. ಅವರ ಬಗ್ಗೆ ಅಲ್ಲಲ್ಲಿ ಅನುಕಂಪದ ಮಾತುಗಳು ಕೇಳಿ ಬರುತ್ತವೆ. ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಶ್ರೀನಿವಾಸಗೌಡರ ಪ್ರಚಾರ ಮಾಡುತ್ತಿದ್ದಾರೆ.

ಒಟ್ಟು 25,388 ಮತಗಳಿವೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಮತಗಳು ಬೆಳಗಾವಿ ಜಿಲ್ಲೆಯೊಂದರಲ್ಲೇ ಇವೆ. ಪಕ್ಷದ ಅಭ್ಯರ್ಥಿಗಳಲ್ಲಿ ಹುಕ್ಕೇರಿ ಬೆಳಗಾವಿ ಜಿಲ್ಲೆಯವರಾಗಿದ್ದಾರೆ. ಬಿಜೆಪಿಯ ಅರುಣ ಶಹಾಪುರ, ಜೆಡಿಎಸ್‌ನ ಚಂದ್ರಶೇಖರ ಲೋಣಿ ವಿಜಯಪುರ ಜಿಲ್ಲೆಯವರಾಗಿದ್ದರೆ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಬನ್ನೂರ ಅವರು ಬಾಗಲಕೋಟೆ ಜಿಲ್ಲೆಯವರು.

ಕಳೆದ ಬಾರಿ ಶಹಾಪುರ ಪ್ರಥಮ ಪ್ರಾಶಸ್ತದ 5,927, ಎನ್‌.ಬಿ. ಬನ್ನೂರ 4,918, ಚಂದ್ರಶೇಖರ ಲೋಣಿ 1,230 ಮತಗಳನ್ನು ಪಡೆದಿದ್ದರು. ಬೆಳಗಾವಿಯಲ್ಲಿ ಇತ್ತೀಚೆಗೆ ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಪಕ್ಷದ ನಾಯಕರ ಆಂತರಿಕ ಆಟದಿಂದಾಗಿ ಸೋತಿದ್ದರು. ಮತ್ತೆ ಅಂಥ ಆಟ ಬೆಳಗಾವಿಯಲ್ಲಿ ನಡೆಯಲಿದೆಯೇ? ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ.

 


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ