ಕೇರಳ: ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದ ಯುವತಿಯೊಬ್ಬಳನ್ನು ಜೇನ್ನೊಣಗಳು ರಕ್ಷಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಇಲ್ಲಿಯ ಆಲಪ್ಪುಳ ಕರಾವಳಿಯ ಕಾಯಂಕುಲಂನಲ್ಲಿ ಇಂಥದ್ದೊಂದು ಅಚ್ಚರಿಯ ಘಟನೆ ಜರುಗಿದೆ.
ಮಗುವನ್ನು ಕರೆದುಕೊಂಡು ಹೋಗಿದ್ದ ಪತಿ, ಮಗುವನ್ನು ನೋಡಲು ಬಿಡುತ್ತಿಲ್ಲ ಎನ್ನುವ ಕಾರಣಕ್ಕೆ, ಪತಿಯ ಮೇಲಿನ ಸಿಟ್ಟಿನಿಂದ ಯುವತಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಏರಿದ್ದಳು.
ಪತಿ ಮಗುವನ್ನು ತೋರಿಸದೇ ಹೋದರೆ ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಇದನ್ನು ನೋಡಿದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಕೆಳಕ್ಕೆ ಇಳಿಯುವಂತೆ ಹೇಳಿದ್ದಾರೆ. ಆಕೆಯ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಯುವತಿ ತಾನು ಮೇಲಿನಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ.
ಏನು ಮಾಡುವುದು ಎಂದು ತೋಚದ ಪೊಲೀಸರು ಆಕೆಯನ್ನು ಬಚಾವ್ ಮಾಡಲು ಯೋಜನೆ ರೂಪಿಸುತ್ತಿದ್ದರು. ಒಂದು ವೇಳೆ ಆಕೆ ಮೇಲಿನಿಂದ ಬಿದ್ದರೆ ಏನೂ ಆಗದಂತೆ ನೋಡಿಕೊಳ್ಳುವ ಸಲುವಾಗಿ ಕೆಳಗಿನಿಂದ ದೊಡ್ಡ ಬಲೆಯನ್ನೂ ಹಿಡಿದುಕೊಳ್ಳಲಾಗಿತ್ತು. ಆದರೂ ಯಾವ ಕ್ಷಣ ಏನು ಬೇಕಾದರೂ ಆಗುವ ಸಾಧ್ಯತೆ ಇತ್ತು.
ಈ ನಡುವೆ ಆಕೆಯ ಮನವನ್ನು ಒಲಿಸಲು ಪೊಲೀಸರು, ಸ್ಥಳೀಯರು ಸಾಕಷ್ಟು ಪ್ರಯತ್ನಿಸುತ್ತಲೇ ಇದ್ದರು. ಯುವತಿ ಮಾತ್ರ ಜಪ್ಪಯ್ಯ ಎಂದರೂ ಕೆಳಕ್ಕೆ ಬರಲು ಒಪ್ಪಿರಲಿಲ್ಲ. ಆದರೆ ಇದೇ ವೇಳೆ ಯುವತಿಯ ರಕ್ಷಣೆಗೆ ಬಂದದ್ದು ಜೇನ್ನೊಣಗಳು!
ಆಗಿದ್ದೇನೆಂದರೆ, ಟವರ್ ಮೇಲುಗಡೆ ಜೇನುಗೂಡು ಕಟ್ಟಿತ್ತು. ಯುವತಿ ಟವರ್ ಏರಿದಾಗ ಆಕೆಯ ಕೈ ತಗುಲಿ ಜೇನುನೊಣಗಳು ಒಂದೇ ಸಮನೆ ಹೊರಕ್ಕೆ ಹಾರಿ ಆಕೆಯನ್ನು ಕಚ್ಚಲು ಶುರು ಮಾಡಿವೆ. ಜೇನುನೊಣಗಳ ಕಡಿತ ತಾಳದೇ ಹೆದರಿದ ಯುವತಿ ಟವರ್‌ನಿಂದ ಇಳಿಯಲು ಆರಂಭಿಸಿದ್ದಾಳೆ. ಮೇಲಿನಿಂದ ಜಿಗಿಯುವ ಯೋಚನೆ ಬಿಟ್ಟು ಸರಸರನೆ ಟವರ್ ಇಳಿದಿದ್ದಾಳೆ. ಕೆಳಕ್ಕೆ ಸಮೀಪಿಸುತ್ತಿದ್ದಂತೆಯೇ ಕೆಳಗೆ ಜಿಗಿದು, ಅಲ್ಲಿ ಇದ್ದ ನೆಟ್ ಮೇಲೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಜನರು, ಪೊಲೀಸರು ಹಿಡಿದುಕೊಂಡಿದ್ದರಿಂದ ಪ್ರಾಣ ಉಳಿದಿದೆ.
Laxmi News 24×7