ಬೆಂಗಳೂರು : ಸರ್ಕಾರಿ ನೌಕರನ 2 ನೇ ಪತ್ನಿ ಅಥವಾ ನಂತರದ ಪತ್ನಿಯಿಂದ ಜನಿಸಿದ ಮಕ್ಕಳನ್ನು ಸಹ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ಅನ್ವಯ ಸರ್ಕಾರಿ ನೌಕರರು ಸೇವೆಯಲ್ಲಿ ಇರುವಾಗ ಮೃತಪಟ್ಟಲ್ಲಿ ಅವರ ಅವಲಂಬಿತರಲ್ಲಿ ಅರ್ಹರಾದ ಒಬ್ಬರಿಗೆ ನಿಯಮಗಳಲ್ಲಿ ನಿಗದಿಪಡಿಸಿರುವ ಷರತ್ತು ಮತ್ತು ನಿಬಂಧನೆಗಳನ್ನು ಪೂರೈಸುವ ಷರತ್ತಿಗೆ ಒಳಪಟ್ಟು ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಬಹುದಾಗಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ಸರ್ಕಾರದ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
2022 ರ ಫೆ.24 ರಂದು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಸರ್ಕಾರಿ ನೌಕರನ ಎರಡನೇ ಪತ್ನಿಯಿಂದ ಜನಿಸಿದ ಮಕ್ಕಳು ಎನ್ನುವ ಕಾರಣಕ್ಕೆ ಮಕ್ಕಳಲ್ಲಿ ತಾರತಮ್ಯ ಮಾಡುವುದು ಭಾರತದ ಸಂವಿಧಾನದ ಅನುಚ್ಛೇದ 16(2) ರ ಉಲ್ಲಂಘನೆಯಾಗುತ್ತದೆ. ಹಾಗಾಗಿ ಇಂತಹ ಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಪರಿಗಣಿಸದೇ ಇರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿತ್ತು. ನ್ಯಾಯಾಲಯದ ಈ ಅಭಿಪ್ರಾಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.