ಭಟ್ಕಳ: ರಾಜಕೀಯ ಕ್ಷೇತ್ರ ಸಂಪೂರ್ಣ ಹಾಳಾಗಿದ್ದು ರಾಜ್ಯಾಂಗದ ವ್ಯವಸ್ಥೆಯೇ ದಿಕ್ಕು ತಪ್ಪಿದೆ, ರಾಜ್ಯಾಂಗದಲ್ಲಿ ಸಮಗ್ರ ಬದಲಾವಣೆ ತರಲು ಮುಂದಿನ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ನಾನೂ ಸೇರಿದಂತೆ 50 ಸ್ವಾಮೀಜಿಗಳು ಸ್ಪರ್ಧಿಸಲಿದ್ದೇವೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದ್ದಾರೆ.
ಶಿರಾಲಿಯ ಹಳೇಕೋಟೆ ಹನುಮಂತ ದೇವಸ್ಥಾನದ ಶಿಲಾಮಯ ದೇಗುಲ ಸಮರ್ಪಣೆ, ಶ್ರೀ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಇಂದು ಶಾಸಕನಾಗುವವನ್ಜು ತಾನೆಷ್ಟು ಗಳಿಸುತ್ತೇನೆ ಎನ್ನುವ ಲೆಕ್ಕಾಚಾರದೊಂದಿಗೆ ಚುನಾವಣೆಗೆ ನಿಲ್ಲುತ್ತಾನೆ. ನಮಗೆ ಸರಕಾರ ಸಂಬಳ ಕೊಡುವುದೂ ಬೇಡ, ಕೇವಲ ರೇಷನ್ ಕೊಟ್ಟರೆ ಸಾಕು, ಕ್ಷೇತ್ರ ಸುತ್ತುವ ಭತ್ಯೆಯನ್ನು ಕೂಡಾ ನಾವು ಕೇಳುವುದಿಲ್ಲ, ಪಿಂಚಣಿಯಂತೂ ಬೇಡವೇ ಬೇಡ ಎಂದ ಸ್ವಾಮೀಜಿಗಳು,ಪ್ರಜೆಗಳ ದುಡ್ದು ಅನಾವಶ್ಯಕ ದುಂದು ವೆಚ್ಚವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಚುನಾವಣೆ ಆಖಾಡಕ್ಕೆ ಧುಮುಕಲು ನಮಗೆ ಮೋದೀಜಿ ಹಾಗೂ ಯೋಗೀಜಿ ಪ್ರೇರಣೆ ಎಂದ ಅವರು ನಾವು ಎಲ್ಲರೂ ಯಾವುದೇ ಪಕ್ಷದಿಂದ ನಿಲ್ಲುವುದಿಲ್ಲ, ನಮಗೆ ಭಗವದ್ಗೀತೆಯೇ ಚಿಹ್ನೆ ಎಂದೂ ಹೇಳಿದರು.