ಬೆಂಗಳೂರು: ಸುಳ್ಳುಶೂರ, ಸಿದ್ದಸೂತ್ರದಾರ, ಸಿದ್ದಕಲಾ ನಿಪುಣ, ರಾಜಕೀಯ ಊಸರವಳ್ಳಿಗೆ ಚುನಾವಣೆಗೆ ಮುನ್ನವೇ ʼಜೆಡಿಎಸ್ ಜ್ವರʼ ಬಂದುಬಿಟ್ಟಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು ಏಕವಚನದಲ್ಲಿ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಹುಬ್ಲೋ ವಾಚ್ ಪ್ರಸಂಗ ಮತ್ತೆ ಪ್ರಸ್ತಾಪಿಸಿದ್ದಾರೆ.
ಹಾಸನದಲ್ಲಿ ವೃಥಾ ಹರಿಬಿಟ್ಟ ʼಸತ್ಯಭಕ್ಷʼ ನಾಯಕನ ಆಚಾರಹೀನ ಅರಿವುಗೆಟ್ಟ ನಾಲಗೆ ಮತ್ತೆ ಹುಚ್ಚುಕುಣಿತ ಮಾಡುತ್ತಿದೆ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇಲ್ಲ, ಮತ್ತೆಮತ್ತೆ ಕೆಣಕುವ ದುಸ್ಸಾಹಸ ಬೇರೆ. ಆಪರೇಷನ್ ಕಮಲ ಬಿಜೆಪಿ ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ? ಇಂಥ ಅನೈತಿಕ ಕೂಸಿಗೆ ಹಾಲೆರೆದು ಬೆಳೆಸಿ, ದೊಡ್ಡದು ಮಾಡಿದ ನೀವು, ಜೆಡಿಎಸ್ ಪಕ್ಷ ಬಿಜೆಪಿ ಬೀ ಟಿಂ ಎಂದು ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದೀರಲ್ಲ? ಇದ್ಯಾವ ಸೀಮೆ ರಾಜಕೀಯ ಎಂದು ಕಿಡಿಕಾರಿದ್ದಾರೆ.
ಬಹಿರಂಗದಲ್ಲಿ ಮಾತ್ರ ಬಿಜೆಪಿ ಕೋಮುವಾದಿ! ಅಂತರಂಗದಲ್ಲಿ ಅದಕ್ಕೆ ನೀವು ಅಡ್ಜಸ್ಟ್ʼಮೆಂಟ್ʼವಾದಿ! ರಾಜಕೀಯ ಊಸರವಳ್ಳಿ, ಸಿದ್ದಕಲಾ ನಿಪುಣನೇ.. ನಿಮ್ಮ ರಾಜಕೀಯ ಲೀಲೆಗಳು ಒಂದಾ ಎರಡಾ? 2008-2009; ಶಾಸಕರ ಖರೀದಿ ಚಾಪ್ಟರ್ 1. ಆಗ 8 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕಿತ್ತೆಸೆಯಲು ಬಿಜೆಪಿ ಜತೆ ಡೀಲ್ ಕುದುರಿಸಿಕೊಂಡು ಡಿಂಗ್ ಡಾಂಗ್ ಹಾಡಿದ್ದು ಯಾರಯ್ಯ? ಹೆಸರಿನಲ್ಲಿ ʼರಾಮʼ! ಉಂಡ ಮನೆಗೆ ಪಂಗನಾಮ! ಸ್ವಯಂ ಘೋಷಿತ ಸತ್ಯಹರಿಶ್ಚಂದ್ರ ಎಂದು ಎಚ್ ಡಿಕೆ ಟೀಕೆ ಮಾಡಿದ್ದಾರೆ.