ಮೈಸೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬೇಸತ್ತು ವ್ಯಕ್ತಿಯೋರ್ವರು ಮೈಸೂರು ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆಯಿತು.
ನಗರದ ವಿದ್ಯಾರಣ್ಯಪುರಂ ನಿವಾಸಿ ಪ್ರಕಾಶ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ.
ಪ್ರಕಾಶ್ ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ವಾಸವಿದ್ದಾರೆ. ಇವರ ತಾಯಿ ಹಾಗೂ ಸಹೋದರಿಯರು ಆಗಾಗ ಆಸ್ತಿ ವಿಚಾರಕ್ಕೆ ಜಗಳವಾಡುತ್ತಿದ್ದಾರಂತೆ. ಇದರಿಂದ ಬೇಸತ್ತ ಪ್ರಕಾಶ್ ಕುಟುಂಬ ಪಿತ್ರಾರ್ಜಿತ ಆಸ್ತಿ ಇರುವ ವಿದ್ಯಾರಣ್ಯಪುರಂನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿಗೂ ಅವರ ಸಹೋದರಿಯರು ಬಂದು ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ 2011 ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ವಿಚಾರಣೆಗೆ ತಾಯಿ ಮತ್ತು ಸಹೋದರಿಯರು ಹಾಜರಾಗುತ್ತಿರಲಿಲ್ಲ ಎಂದು ಹೇಳಲಾಗಿದೆ. ಇದರಿಂದ ಬೇಸರಗೊಂಡ ಪ್ರಕಾಶ್ ಸೋಮವಾರ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿಲ್ಲ ಎಂದು ನ್ಯಾಯಾಧೀಶರ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ವ್ಯಕ್ತಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					 
						
					