ಬೆಳಗಾವಿ: ರಾಜ್ಯದ ಹಲವೆಡೆಗಳಲ್ಲಿ ಮಾರಿಕಾಂಬೆ ಜಾತ್ರೆಯ ಸಡಗರ ಶುರುವಾಗಿದೆ. ಭಕ್ತಾದಿಗಳು ತಾಯಿ ಮಾರಿಕಾಂಬೆಯಲ್ಲಿ ಹರಕೆ ತೀರಿಸಲು ತಂಡೋಪತಂಡವಾಗಿ ಬರುತ್ತಿದ್ದರೆ, ಎಷ್ಟೋ ಭಕ್ತರು ತಮ್ಮ ಕೋರಿಕೆಯನ್ನು ಈಡೇರಿಸುವಂತೆ ಮಾರಿಕಾಂಬೆಯಲ್ಲಿ ಬೇಡಿಕೊಳ್ಳುತ್ತಿದ್ದಾರೆ.
ಈ ಬಾರಿಯ ಗಮನ ಸೆಳೆದದ್ದು ಬೆಳಗಾವಿಯ ಮಾರಿಕಾಂಬೆ ಜಾತ್ರೆ. ಇಲ್ಲಿ ಬಾಳೆಹಣ್ಣಿನ ಹರಕೆ ವಿಶಿಷ್ಠವಾಗಿ ಕಂಡುಬಂದಿದೆ. ಪೊಲೀಸರು ಸೇರಿದಂತೆ ಹಲವರು ಈ ಬಾರಿ ತಮ್ಮ ಕೋರಿಕೆಯನ್ನು ಈಡೇರಿಸುವಂತೆ ಮಾರಿಕಾಂಬೆಯಲ್ಲಿ ವಿಭಿನ್ನವಾಗಿ ಹರಕೆ ಹೊತ್ತುಕೊಂಡಿದ್ದಾರೆ.
ತಮ್ಮ ತಮ್ಮ ಬೇಡಿಕೆಗಳನ್ನು ಬಾಳೆಹಣ್ಣಿನ ಮೇಲೆ ಬರೆದು ಅದನ್ನು ತಾಯಿಗೆ ಅರ್ಪಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಸುಧಾರಣೆಗೆ ಹಾಗೂ ಪೊಲೀಸರಿಗೆ ವಿವಿಧ ರೀತಿಯ ಸವಲತ್ತು ನೀಡುವ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಎಚ್.ಔರಾದ್ಕರ್ ವರದಿಯನ್ನು ಅನುಷ್ಠಾನಗೊಳಿಸುವಂತೆ ಬಾಳೆಹಣ್ಣಿನ ಮೇಲೆ ಕೋರಿಕೆ ಸಲ್ಲಿಸಲಾಗಿದೆ. ಇದರ ಜತೆಗೆ ಪೊಲೀಸ್ ಇಲಾಖೆಗೆ ಹೆಚ್ಚಿನ ಶಕ್ತಿ ಕೊಡುವಂತೆ ಪೊಲೀಸರು ಕೋರಿಕೊಂಡಿದ್ದಾರೆ.
ಇದು ಪೊಲೀಸ್ ಇಲಾಖೆ ಮಾತಾದರೆ, ಇನ್ನು ಕೆಲವು ಭಕ್ತಾದಿಗಳು ಕರೊನಾ ಬೇಗ ತೊಲಗಿಸು ತಾಯೇ ಎಂದು ಕೋರಿಕೊಂಡಿದ್ದರೆ, ಕೆಲವರು, ತಿಂಗಳ ಸಂಬಳ ಬೇಗವಾಗಲಿ ತಾಯಿ ಎಂದಿದ್ದಾರೆ. ಕ್ರಿಕೆಟ್ ಪ್ರಿಯರು ಆರ್ಸಿಬಿ ಕಪ್ ಈ ಬಾರಿಯಾದರೂ ನಮ್ಮದೇ ಆಗುವ ಹಾಗೆ ಮಾಡು ಅಮ್ಮಾ ಎಂದು ಬಾಳೆಹಣ್ಣಿನ ಮೇಲೆ ಕೋರಿಕೆ ಸಲ್ಲಿಸಿದ್ದಾರೆ. ಸ್ಟೆಫನ್ ಜೇಮ್ಸ್ ಎನ್ನುವವರು ಸೆರೆ ಹಿಡಿದಿರುವ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿದೆ.