ಸವದತ್ತಿ ಶಾಸಕರು ಮತ್ತು ಬಿಜೆಪಿ ಸರ್ಕಾರ 120 ಸ್ಪೀಡ್‍ನಲ್ಲಿ ಇದೆ. ಹೀಗಾಗಿ ಕೋವಿಡ್, ಪ್ರವಾಹ ಏನು ಕಾಣುತ್ತಿಲ್ಲ. ಈಗಾಗಲೇ ಗಾಡಿ ಸ್ಪೀಡ್ ಅನ್ನು 60ಕ್ಕೆ ತಂದಿದ್ದೇವೆ. ಇನ್ನೂ 18 ತಿಂಗಳ ಆಡಳಿತದಲ್ಲಿ ಮತ್ತಷ್ಟು ಸ್ಪೀಡ್ ಕಡಿಮೆ ಮಾಡುತ್ತೇವೆ. ಆ ಲೆಕ್ಕಾಚಾರದಲ್ಲಿ ನಾವಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.
ಮುನವಳ್ಳಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿದರು. ಆನಂದ ಮಾಮನಿ ಅವರು ಸತತ ಮೂರು ಬಾರಿ ಶಾಸಕರಾಗಿದ್ದಾರೆ. ಮುನವಳ್ಳಿ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿತ್ತು. ಆದರೆ ಶಾಸಕರೂ ಅಭಿವೃದ್ಧಿಗೆ ಆಸಕ್ತಿ ತೋರಿಲ್ಲ ಅನಿಸುತ್ತೇ ಎಂದು ಕಾಲೆಳೆದರು. ಈಗಾಗಲೇ ಬಿಜೆಪಿ ಸರ್ಕಾರದ ಸ್ಪೀಡ್‍ನ್ನು ಕಡಿಮೆ ಮಾಡಿದ್ದೇವೆ. ಇನ್ನೂ 18 ತಿಂಗಳ ಅವಧಿಯಲ್ಲಿ ಮತ್ತಷ್ಟು ಸ್ಪೀಡ್ ಕಡಿಮೆ ಮಾಡಲಿದ್ದೇವೆ. ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ನಂತರ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಬಡವರು ಹಸಿವಿನಿಂದ ಸಾಯುವಂತ ಪರಿಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯ ಅನ್ನಭಾಗ್ಯ ಯೋಜನೆ ಬಡವರ ಹಸಿವು ನೀಗಿಸಿತು. ಕಾಂಗ್ರೆಸ್ ಸರ್ಕಾರದಲ್ಲಿ ಐದು ರೂಪಾಯಿ ಬೆಲೆ ಏರಿಕೆ ಆದ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಚಕ್ಕಡಿ ಓಡಿಸಿ, ಬೊಬ್ಬೆ ಹೊಡೆದಿದ್ದರು. ಆದರೆ ಈಗ ನೂರರ ಗಡಿ ದಾಟಿದೆ. ಅಚ್ಚೇ ದಿನ್ ಆಯೇಗಾ, ಅಂತಾ ಹೇಳಿ ಅಧಿಕಾರ ತೆಗೆದುಕೊಂಡರು, ಈಗ ನಾವು ಅಚ್ಚೇ ದಿನ್ ಬೇಡಾ, ಹಳೆ ದಿನಗಳನ್ನೇ ಮರಳಿ ನೀಡಿ ಎನ್ನುವಂತಾಗಿದೆ ಎಂದು ಟಾಂಗ್ ಕೊಟ್ಟರು.
ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಕಿ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಮುಖಂಡರು ಮುನವಳ್ಳಿ ಪುರಸಭೆಯ 23 ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಆರ್.ವಿ.ಪಾಟೀಲ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ವಿಶ್ವಾಸ್ ವೈದ್ಯ, ರವೀಂದ್ರ ಯಲಿಗಾರ, ಪಂಚನಗೌಡ್ರ ದ್ಯಾಮನಗೌಡ್ರ, ಉಮೇಶ್ ಬಾಳಿ, ಪಂಚಪ್ಪ ಮಲ್ಲಾಡ, ಪಕ್ಕೀರಪ್ಪ, ಸೌರಭ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7