Breaking News

‘ನನ್ನ ಮನಸ್ಸಿಗೆ ನೋವುಂಟು ಮಾಡಿದವರನ್ನು ಮನೆಗೆ ಕಳುಹಿಸದೆ ಬಿಡುವುದಿಲ್ಲ’: ರಮೇಶ ಜಾರಕಿಹೊಳಿ

Spread the love

ಬೆಳಗಾವಿ: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಜ’ ಎಂದಿರುವ ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ‘ನನ್ನ ಮನಸ್ಸಿಗೆ ನೋವುಂಟು ಮಾಡಿದವರನ್ನು ಮನೆಗೆ ಕಳುಹಿಸದೆ ಬಿಡುವುದಿಲ್ಲ’ ಎಂದು ಗುಡುಗಿದರು. ಮೈಸೂರಿನಲ್ಲಿ ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಮರಳಿದ ಅವರು ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಮಾತನಾಡಿದರು.

‘ಮುಂಬೈಗೆ ಹೋಗಿದ್ದರಲ್ಲಿ ರಾಜಕಾರಣವಿದೆ. ಅದರಲ್ಲಿ ಮುಚ್ಚು ಮರೆ ಏನಿಲ್ಲ. ಆದರೆ, ಸುತ್ತೂರು ಮಠಕ್ಕೆ ಹೋಗಿದ್ದರಲ್ಲಿ ರಾಜಕಾರಣವಿಲ್ಲ. ಪೂರ್ವಾಶ್ರಮದ ತಾಯಿ ನಿಧನರಾದ್ದರಿಂದ ಶ್ರೀಗಳನ್ನು ಮಾತನಾಡಿಸಲು ಹೋಗಿದ್ದೆ’ ಎಂದು ಪ್ರತಿಕ್ರಿಯಿಸಿದರು. ‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಜ. ಅದರಲ್ಲಿ ಎರಡು ಮಾತಿಲ್ಲ. ಆಂತರಿಕವಾಗಿ ಮಿತ್ರ ಮಂಡಳಿಯೊಂದಿಗೆ ಈ ಮಾತನಾಡಿದ್ದೆ.

ಅದು ಮಾಧ್ಯಮಕ್ಕೆ ಹೇಗೆ ಸೋರಿಕೆಯಾಯಿತೋ ಗೊತ್ತಿಲ್ಲ. ನಾನು ಹೇಳಿರುವುದು ನಿಜ. ಇವತ್ತೇ ಕೊಡುತ್ತೇನೆ ಎಂದಲ್ಲ. 7-8 ದಿನಗಳು ಬಿಟ್ಟು ಮಾತನಾಡುತ್ತೇನೆ. ಕೆಲವು ಹಿರಿಯರು ಹಾಗೂ ಹಿತೈಷಿಗಳ ಸಲಹೆಯಂತೆ ಸದ್ಯಕ್ಕೆ ಸುಮ್ಮನಾಗಿದ್ದೇನೆ’ ಎಂದರು. ಪಕ್ಷದ ನಾಯಕರೇ ಬೆನ್ನಿಗೆ ಚೂರಿ ಹಾಕಿದರೇ ಎಂಬ ಪ್ರಶ್ನೆಗೆ, ‘ಪಕ್ಷ, ಸಂಘ ಪರಿವಾರ ಹಾಗೂ ದಹೆಲಿಯ ಹೈಕಮಾಂಡ್ ನನ್ನನ್ನು ಬಹಳ ಪ್ರೀತಿಯಿಂದ ನಡೆಸಿಕೊಂಡಿದೆ. ಕೆಲವೊಂದು ಜನ ಚೂರಿ ಹಾಕಿದ್ದಾರೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇನೆ’ ಎಂದು ತಿಳಿಸಿದರು.

 

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದು ಆತುರದ ನಿರ್ಧಾರವಲ್ಲ. ನನ್ನ ಸಹೋದರರು ಶಾಸಕರಾಗಿದ್ದಾರೆ. ನನ್ನ ಮಕ್ಕಳಿದ್ದಾರೆ. ನಮ್ಮ ಮನೆಯಲ್ಲಿ ಇನ್ನೂ ಬಹಳಷ್ಟು ಹುಲಿಗಳಿವೆ. ರಮೇಶ ಜಾರಕಿಹೊಳಿ ಮೂಲೆಗುಂಪು ಮಾಡಿದರೆ ಎಲ್ಲವೂ ಮುಗಿದು ಹೋಯಿತು ಎಂದು ನಮ್ಮ ವಿರೋಧಿಗಳು ತಿಳಿದಿರಬಹುದು. ಆದರೆ, ಹತ್ತು ಪಟ್ಟು ಹುಲಿಗಳಿವೆ. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ’ ಎಂದು ಪ್ರತಿಕ್ರಿಯಿಸಿದರು. ‘ಅಸಮಾಧಾನ ಏನಿದೆ ಎನ್ನುವುದನ್ನು ಈಗ ಬಹಿರಂಗಪಡಿಸುವುದಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಕಾನೂನು ತೊಡಕುಗಳಿವೆ. ಸಮಯ ಕೊಡಿ’ ಎಂದರು.

‘ಗಾಡ್‌ಫಾದರ್‌ ದೇವೇಂದ್ರ ಫಡಣವಿಸ್‌ ಭೇಟಿಯಾಗಲು ಮುಂಬೈಗೆ ಹೋಗಿದ್ದೆ. ಅವರೊಂದಿಗೆ ಚರ್ಚಿಸಿದ್ದನ್ನು ಹೇಳಲಾಗುವುದಿಲ್ಲ. ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುವಷ್ಟು ಸಣ್ಣ ಮನುಷ್ಯ ನಾನಲ್ಲ. ಸರ್ಕಾರ ತಗೆದು ಇನ್ನೊಂದು ಸರ್ಕಾರ ಮಾಡುವಷ್ಟು ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಮತ್ತೊಬ್ಬರನ್ನು ಮಂತ್ರಿ ಮಾಡುವ ತಾಕತ್ತಿದೆ. ಹೀಗಿರುವಾಗ ನನ್ನನ್ನು ಮಂತ್ರಿ ಮಾಡಿರೆಂದು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ’ ಎಂದು ಹೇಳಿದರು. ‘ದೇವೇಂದ್ರ ಫಡಣವಿಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿದ್ದಾಗ, ಇಲ್ಲಿ ಆಪರೇಷನ್ ಕಮಲ ಮಾಡಿ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ತೆಗೆಯುವುದಾಗಿ ಮಾತು ಕೊಟ್ಟಿದ್ದೆ. ಆಗ ನಾನು ಹೇಳಿದ್ದು ನಡೆದಿರುವುದನ್ನು ಅವರಿಗೆ ನೆನಪಿಸಿದೆ. ಅವರು ನನ್ನ ಬೆನ್ನಿಗೆ ನಿಂತಿದ್ದಾರೆ’ ಎಂದರು. ‘ಮುಖ್ಯಮಂತ್ರಿ ನಿಮ್ಮೊಂದಿಗೆ ಚರ್ಚಿಸಿದ್ದಾರೆಯೇ?’ ಎಂಬ ಪ್ರಶ್ನೆಗೆ, ‘ನಾನು ನಾಟಕ ಮಾಡುವ ವ್ಯಕ್ತಿಯಲ್ಲ. ಮಾಧ್ಯಮದ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವ ವ್ಯಕ್ತಿಯಲ್ಲ. ಏನು ಹೇಳಬೇಕೋ ಹೇಳಿದ್ದೇನೆ. ಮುಂದೇನಾಗುವುದೋ ನೋಡೋಣ’ ಎಂದು ಪ್ರತಿಕ್ರಿಯಿಸಿದರು. ‘ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೆವೆ. ಮುಂದೆ ಹೈಕಮಾಂಡ್‌ ಏನು ತೀರ್ಮಾನಿಸುತ್ತದೆಯೋ ನೋಡೋಣ’ ಎಂದರು.


Spread the love

About Laxminews 24x7

Check Also

ಪಂಚ ಗ್ಯಾರಂಟಿಗಳಿಗಾಗಿ ₹63 ಸಾವಿರ ಕೋಟಿ ಸಾಲ ಮಾಡಿದ ರಾಜ್ಯ ಸರ್ಕಾರ: ಸಿಎಜಿ ವರದಿ

Spread the love ಬೆಂಗಳೂರು: ಪಂಚ ಗ್ಯಾರಂಟಿಗಳಿಗಾಗಿ 2023-24 ಸಾಲಿನಲ್ಲಿ ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ 63 ಸಾವಿರ ಕೋಟಿ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ