ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಕಮತಗಿಯಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ ₹11.05 ಲಕ್ಷ ಮೌಲ್ಯದ 2261 ಚೀಲ ವಿವಿಧ ಬಗೆಯ ರಸಗೊಬ್ಬರವನ್ನು ಕೃಷಿ ಇಲಾಖೆಯ ವಿಚಕ್ಷಣಾ ತಂಡದವರು ಸೋಮವಾರ ವಶಪಡಿಸಿಕೊಂಡಿದ್ದಾರೆ
ಕಮತಗಿಯ ವಿನಾಯಕ ಕೃಷಿ ಕೇಂದ್ರ ಹಾಗೂ ಅನ್ನದಾನೇಶ್ವರಿ ಕೃಷಿ ಸೇವಾ ಕೇಂದ್ರಗಳ ಹೆಸರಿನ ಉಗ್ರಾಣಗಳಲ್ಲಿ ರಸಗೊಬ್ಬರದ ಚೀಲಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ವಿಚಕ್ಷಣಾ ತಂಡದ ಸಹಾಯಕ ನಿರ್ದೇಶಕರಾದ ಬಿ.ಜಿ.ಮಾಳೇದ, ಸತೀಶ ಮಾವಿನಕೊಪ್ಪ ಹಾಗೂ ಸಿದ್ದನಗೌಡ ಪಾಟೀಲ ಅವರನ್ನೊಳಗೊಂಡ ತಂಡ ದಾಳಿ ನಡೆಸಿದೆ.
ವಶಪಡಿಸಿಕೊಂಡ ರಸಗೊಬ್ಬರದಲ್ಲಿ 1540 ಚೀಲ ಯೂರಿಯಾ, 180 ಚೀಲ ಪೊಟ್ಯಾಷ್ (ಎಂಒಪಿ), 541 ಚೀಲ ಕಾಂಪ್ಲೆಕ್ಸ್ ಸೇರಿವೆ. ಅಕ್ರಮ ದಾಸ್ತಾನಿಗೆ ಸಂಬಂಧಿಸಿದಂತೆ ಎರಡೂ ಕೃಷಿ ಕೇಂದ್ರಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಬಲೆಗೆ ತಹಶೀಲ್ದಾರ್ ಕಚೇರಿ ಎಸ್‌ಡಿಎ
ಬಾಗಲಕೋಟೆ: ಜಮೀನಿನ ಉತಾರದಲ್ಲಿನ ಲೋಪದ ತಿದ್ದುಪಡಿಗೆ ರೈತನಿಗೆ ₹18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಬಾದಾಮಿಯ ತಹಶೀಲ್ದಾರ್ ಕಚೇರಿ ದ್ವಿತೀಯ ದರ್ಜೆ ಸಹಾಯಕ ರವೀಂದ್ರ ಹುಲ್ಲನ್ನವರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಬಾದಾಮಿ ತಾಲ್ಲೂಕಿನ ಕೈನಕಟ್ಟಿ ಗ್ರಾಮದ ಹನುಮಂತಗೌಡ ರಾಮನಗೌಡ ಪಾಟೀಲ ತಮ್ಮ ಸರ್ವೆ ನಂ 60/4ಬ, 12/2, 74/3 ರಲ್ಲಿನ ಜಮೀನಿನ ಉತಾರದಲ್ಲಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಆ ಕೆಲಸ ಮಾಡಿಕೊಡಲು ರವೀಂದ್ರ ಹುಲ್ಲನ್ನವರ ₹18 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಹನುಮಂತ
ಗೌಡ ಪಾಟೀಲ ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಸೋಮವಾರ ರವೀಂದ್ರ ಹುಲ್ಲನ್ನವರ ರೈತನಿಂದ ಲಂಚದ ಹಣ ಸ್ವೀಕರಿಸುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯ ವೇಳೆ ಎಸಿಬಿ ಡಿವೈಎಸ್ಪಿ ಸುರೇಶ ರೆಡ್ಡಿ, ಇನ್‌ಸ್ಪೆಕ್ಟರ್ ಸಮೀರ್ ಮುಲ್ಲಾ, ವಿಜಯಮಹಾಂತೇಶ ಮಠಪತಿ ಹಾಗೂ ಸಿಬ್ಬಂದಿ ಹಾಜರಿದ್ದರು.