ಬೆಳಗಾವಿ: ತಮ್ಮ ಸಹೋದರ ಚನ್ನರಾಜ ಹಟ್ಟಿಹೊಳಿ ಅವರ ಪುತ್ರ ಹರ್ಷಿತ್ ಜನ್ಮದಿನದ ಅಂಗವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಬೆಳಗಾವಿಯ ಭೂತರಾಮನಹಟ್ಟಿಯ ಕಿತ್ತೂರ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ತೆರಳಿ ಶೌರ್ಯ ಎನ್ನುವ ಹುಲಿಯನ್ನು ದತ್ತು ಪಡೆದಿದ್ದಾರೆ.
ಆರಂಭಿಕವಾಗಿ 1 ಲಕ್ಷ ರೂ.ಗಳ ಚೆಕ್ ನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ ಅವರು ಹುಲಿಯ ಸಂಪೂರ್ಣ ಜೀವಿತಾವಧಿ ಆರೈಕೆ ವಹಿಸಿಕೊಂಡಿರುವುದಾಗಿ ತಿಳಿಸಿದರು.
ಲಾಕ್ ಡೌನ್ ಕಾರಣದಿಂದಾಗಿ ಪ್ರಾಣಿ ಸಂಗ್ರಹಾಲಯಗಳಿಗೆ ಜನರ ಬರುವಿಕೆ ಕಡಿಮೆಯಾಗಿದ್ದು, ಪ್ರಾಣಿ ಸಂಗ್ರಹಾಲಯಗಳ ನಿರ್ವಹಣೆ ಮತ್ತು ಪ್ರಾಣಿಗಳ ಆರೈಕೆ ಮಾಡುವುದು ಅರಣ್ಯ ಇಲಾಖೆಗೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೌರ್ಯ ಹುಲಿಯನ್ನು ದತ್ತು ಪಡೆದಿದ್ದೇನೆ ಎಂದು ಹೇಳಿದರು.
ಈ ಹುಲಿಯ ಆರೈಕೆಯ ಸಲುವಾಗಿ ಪ್ರಾರಂಭದಲ್ಲಿ ಒಂದು ಲಕ್ಷ ರೂ,ಗಳ ಚೆಕ್ ನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದೇನೆ. ಸಾರ್ವಜನಿಕರು ಪ್ರಾಣಿಗಳ ಆರೈಕೆಗೆ ಮುಂದಾಗುವ ಮೂಲಕ ಮಾನವೀಯತೆಗೆ ಎಡೆ ಮಾಡಿಕೊಡಬೇಕು ಎಂದು ವಿನಂತಿಸಿದರು.
ಚನ್ನರಾಜ ಹಟ್ಟಿಹೊಳಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Laxmi News 24×7